ದಸರಾ ಮಹೋತ್ಸವಕ್ಕೆ ಇಂದಿನಿಂದ ಚಾಲನೆ: ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಿರುವ ಸಾಹಿತಿ ಭಾನು ಮುಷ್ತಾಕ್

ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಇಂದಿನಿಂದ ಚಾಲನೆ ದೊರೆಯಲಿದೆ. ನಾಡ ದೇವಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಸರಾಕ್ಕೆ ಚಾಲನೆ ನೀಡಲು ಸಕಲ ಸಿದ್ಧತೆಗಳು ನಡೆದಿವೆ.
ಸಾಹಿತಿ ಭಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಚಾಮುಂಡೇಶ್ವರಿ ದೇವಾಲಯದಲ್ಲಿ ದಸರಾ ಉತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಶುಚಿಗೊಳಿಸಿ, ಹಸಿರು ಸೀರೆಯಿಂದ ಅಲಂಕರಿಸಲಾಗಿದೆ.
ಬೆಳಿಗ್ಗೆ 10:10 ರಿಂದ 10:40 ರ ಒಳಗೆ ವಿವಿಧ ಅಭಿಷೇಕ ಮತ್ತು ಪೂಜಾಕೈಂಕರ್ಯಗಳು ನಡೆಯಲಿವೆ. ಬಳಿಕ, ಬೆಳ್ಳಿ ರಥದಲ್ಲಿ ಉತ್ಸವ ಮೂರ್ತಿಯನ್ನು ವೇದಿಕೆಗೆ ತರಲಾಗುತ್ತದೆ. ಸಾಹಿತಿ ಭಾನು ಮುಷ್ತಾಕ್ ಅವರು ಮಹಿಷಾಸುರ ಮರ್ಧಿನಿ ಉತ್ಸವಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.
ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದ್ದು, 1,000 ಆಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಳೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿ, ವಿಐಪಿ, ಮತ್ತು ಪಾಸ್ ಹೊಂದಿದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಒದಗಿಸಲಾಗಿದೆ. ಬೆಟ್ಟದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇದೇ ವೇಳೆ ಅರಮನೆಯಲ್ಲಿ ಸಂಸದ ಯದುವೀರ್ ಒಡೆಯರ್ 11ನೇ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಚಾಮುಂಡಿ ತೊಟ್ಟಿಯ ವಾಣಿವಿಲಾಸ ದೇವರ ಮನೆಯಲ್ಲಿ ಯದುವೀರ್ ಗೆ ತ್ರಿಶಿಕಾ ಕುಮಾರಿ ಕಂಕಣ ಕಟ್ಟಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD