ಹಾವಿನ ವಿಷ ಹೀರಿ ತಾಯಿಯನ್ನು ರಕ್ಷಿಸಿದ ಪುತ್ರಿ! - Mahanayaka
5:47 PM Tuesday 11 - November 2025

ಹಾವಿನ ವಿಷ ಹೀರಿ ತಾಯಿಯನ್ನು ರಕ್ಷಿಸಿದ ಪುತ್ರಿ!

shramya rai
21/03/2023

ತನ್ನ ತಾಯಿಗೆ ವಿಷಯುಕ್ತ ಹಾವು ಕಚ್ಚಿದ ವೇಳೆ ಸಮಯಪ್ರಜ್ಞೆ ಮೆರೆದ ಮಗಳು ತನ್ನ ಪ್ರಾಣ ಪಣಕ್ಕಿಟ್ಟು ತಾಯಿಯನ್ನು ರಕ್ಷಿಸಿದ ಘಟನೆ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದಲ್ಲಿ ನಡೆದಿದೆ. ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯೆ ಮಮತಾ ರೈ ನಾಗರ ಹಾವು ಕಡಿತಕ್ಕೊಳಗಾದವರಾಗಿದ್ದು, ಅವರ ಪುತ್ರಿ ಶ್ರಮ್ಯಾ ರೈ ರಕ್ಷಿಸಿದ ಧೈರ್ಯವಂತೆ. ಮಮತಾ ರೈ ತನ್ನ ಮನೆಯಿಂದ ಅಲ್ಪ ದೂರದಲ್ಲಿರುವ ತನ್ನ ಮಾವನ ತೋಟಕ್ಕೆ ನೀರು ಬಿಡಲೆಂದು ವಿದ್ಯುತ್ ಪಂಪ್ ಸೆಟ್ ಸ್ವಿಚ್ ಹಾಕಲು ತೆರಳಿದ್ದರು. ಆ ವೇಳೆ ಅವರ ಕಾಲಿಗೆ ಹಾವು ಕಚ್ಚಿದ್ದು, ರಕ್ತ ಬರತೊಡಗಿತು. ಅವರು ತಕ್ಷಣವೇ ಮನೆಗೆ ವಿಚಾರ ತಿಳಿಸಿದ್ದಾರೆ.

ಮನೆಯಲ್ಲಿದ್ದ ಕೆಲಸದವರು ಮಮತಾರ ಕಾಲಿಗೆ ಬೈಹುಲ್ಲಿನಿಂದ ಕಟ್ಟಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಶ್ರಮ್ಯಾ ಹಾವು ಕಚ್ಚಿದ ಭಾಗಕ್ಕೆ ಬಾಯಿಯಿಟ್ಟು ರಕ್ತವನ್ನು ಹೀರಿ ತೆಗೆದಿದ್ದಾರೆ. ಬಳಿಕ ಮಮತಾರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಇದೀಗ ಚೇತರಿಸಿಕೊಂಡಿದ್ದಾರೆ.

ಚಿಕಿತ್ಸೆ ಮಾಡಿದ ವೈದ್ಯರು, ಶ್ರಮ್ಯಾ ಸಕಾಲಿಕವಾಗಿ ನೀಡಿದ ತುರ್ತು ಚಿಕಿತ್ಸೆ ಮಮತಾ ಅಪಾಯದಿಂದ ಪಾರಾಗಲು ಸಹಕಾರಿ ಆಗಿರುವುದಾಗಿ ಹೇಳಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಬಿಎಸ್‌ಎ ವ್ಯಾಸಂಗ ಮಾಡುತ್ತಿರುವ ಶ್ರಮ್ಯಾ ರೈ ಆತಂಕದ ಕ್ಷಣದಲ್ಲೂ ಸಮಯ ಪ್ರಜ್ಞೆ ಮೆರೆದು ತಾಯಿಯ ಜೀವರಕ್ಷಿಸುವಲ್ಲಿ ತೋರಿದ ದಿಟ್ಟತನ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಇತ್ತೀಚಿನ ಸುದ್ದಿ