13 ಕೂಲಿ ಕಾರ್ಮಿಕರ ದಾರುಣ ಸಾವು: ಬೆಚ್ಚಿಬೀಳಿಸಿದ ಚಿಕ್ಕಬಳ್ಳಾಪುರದಲ್ಲಿ ನಡೆದ ಭೀಕರ ಅಪಘಾತ

ಚಿಕ್ಕಬಳ್ಳಾಪುರ: ಭೀಕರ ಅಪಘಾತವೊಂದರಲ್ಲಿ 13 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಚಿತ್ರಾವತಿ ಬಳಿಯ ಸಂಚಾರಿ ಪೊಲೀಸ್ ಠಾಣೆ ಎದುರು ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ನಡೆದಿದೆ.
ಟಾಟಾ ಸುಮೋ ಹಾಗೂ ಕ್ಯಾಂಟರ್ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ. ಟಾಟಾ ಸುಮೋದಲ್ಲಿದ್ದ 13 ಜನರು ಆಂಧ್ರ ಪ್ರದೇಶದಿಂದ ಬೆಂಗಳೂರಿನತ್ತ ಬರುತ್ತಿದ್ದರು. ಈ ವಾಹನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ಮೃತರ ಪೈಕಿ ಒಂದು ಮಗು ಹಾಗೂ ಮೂವರು ಮಹಿಳೆಯರೂ ಸೇರಿದ್ದಾರೆ. ಒಟ್ಟು 8 ಪುರುಷರು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೃತರೆಲ್ಲರೂ ಆಂಧ್ರಪ್ರದೇಶದ ಗೊರಂಟ್ಲ, ಪೆನುಗೊಂಡದವರಾಗಿದ್ದರು, ಎಲ್ಲರೂ ಕೂಲಿ ಕಾರ್ಮಿಕರಾಗಿದ್ದರು ಎಂದು ತಿಳಿದು ಬಂದಿದೆ.
ಮೃತರ ಪೈಕಿ 6 ಮಂದಿಯ ಗುರುತು ಪತ್ತೆ ನಡೆದಿದೆ. ದೊಡ್ಡಬಳ್ಳಾಪುರದ ತಾಯಿ ಅರುಣಾ, ಮಗ ಋತ್ವಿಕ್, ಆಂಧ್ರಪ್ರದೇಶದ ಕೊತ್ತಚೆರುವಿನ ಪೆರುಮಾಳ್ ಪವನ್ ಕುಮಾರ್, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸುಬ್ಬಮ್ಮ, ಬಾಗೇಪಲ್ಲಿ ತಾಲೂಕಿನ ಮಾರ್ಗಾನುಕುಂಟೆಯ ನರಸಿಂಹಮೂರ್ತಿ, ಟಾಟಾ ಸುಮೋ ಚಾಲಕ ಆಂಧ್ರಪ್ರದೇಶದ ಕಲಿಗೆರೆಯ ನರಸಿಂಹಪ್ಪ ಮೃತಪಟ್ಟವರಾಗಿದ್ದಾರೆ. ಇನ್ನುಳಿದ 7 ಮಂದಿಯ ಗುರುತುಪತ್ತೆಗೆ ಕ್ರಮವಹಿಸಲಾಗಿದೆ.