ಗೃಹ ಸಚಿವರ ಬದಲಾವಣೆಗೆ ಮಂಗಳೂರಿನಲ್ಲಿ ವ್ಯಾಪಕ ಒತ್ತಾಯ! - Mahanayaka

ಗೃಹ ಸಚಿವರ ಬದಲಾವಣೆಗೆ ಮಂಗಳೂರಿನಲ್ಲಿ ವ್ಯಾಪಕ ಒತ್ತಾಯ!

parameshwar
28/05/2025


Provided by

ಮಂಗಳೂರು: ಮಂಗಳೂರಿನಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಜನರಲ್ಲಿ ಅಪನಂಬಿಕೆ ಹುಟ್ಟಿಸುತ್ತಿದೆ. ಬಾಳಿ ಬದುಕಬೇಕಾದ ತರುಣರು ಬೀದಿಯಲ್ಲಿ ಹೆಣ ಆಗುತ್ತಿದ್ದಾರೆ. ಇದಕ್ಕೆ ಕೊನೆ ಯಾವಾಗ ಎನ್ನುವ ಪ್ರಶ್ನೆಗಳು ಇದೀಗ ವ್ಯಾಪಕವಾಗಿ ಕೇಳಿ ಬರುತ್ತಿದೆ.

ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆ ಪ್ರಕರಣಗಳನ್ನು ಅಧ್ಯಯನ ಮಾಡಿ, ಕರಾವಳಿಯಲ್ಲಿ ಶಾಶ್ವತವಾಗಿ ಶಾಂತಿ ಸ್ಥಾಪನೆ ಮಾಡುವಲ್ಲಿ ವಿಫಲವಾಗಿದೆ. ಇತ್ತೀಚೆಗಷ್ಟೇ ಸುಹಾಸ್ ಮರ್ಡರ್ ಕೇಸ್ ವೇಳೆ, ಜಿಲ್ಲೆಗೆ ಆಗಮಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್  ಆ್ಯಂಟಿ ಕಮ್ಯುನಲ್ ಫೋರ್ಸ್ ಮಾಡುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ್ದರು. ಆದರೆ, ಬೆಂಗಳೂರಿಗೆ ಮುಟ್ಟುತ್ತಿದ್ದಂತೆಯೇ ಅವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಮರೆತು ಬಿಟ್ಟಂತಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.

ಸದ್ಯ ಗೃಹ ಸಚಿವರನ್ನು ಬದಲಾವಣೆ ಮಾಡಬೇಕು ಎನ್ನುವ ಒತ್ತಾಯ ಮಂಗಳೂರಿನಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಕರಾವಳಿಯಲ್ಲಿ ಕೋಮುಕೃತ್ಯಗಳು ನಿಲ್ಲಬೇಕಾದರೆ ಸಮರ್ಥ ಗೃಹ ಸಚಿವರ ಅಗತ್ಯವಿದೆ. ಕಾಂಗ್ರೆಸ್ ನಲ್ಲಿ ನೇರ ಹಾಗೂ ನಿಷ್ಠೂರ ಮಾತುಗಳ ಮೂಲಕ ಜನಪ್ರಿಯವಾಗಿರುವ ಬಿ.ಕೆ.ಹರಿಪ್ರಸಾದ್ ಅವರು ಗೃಹ ಸಚಿವ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎನ್ನುವ ಮಾತುಗಳು ಮಂಗಳೂರಿನಾದ್ಯಂತ ಕೇಳಿ ಬಂದಿದೆ.

ರಾಜ್ಯ ಸರ್ಕಾರವು ಮಂಗಳೂರಿನಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣಗಳ ಬಗ್ಗೆ ವಿಭಿನ್ನವಾದ ರೀತಿಯಲ್ಲಿ ಕ್ರಮಕೈಗೊಳ್ಳಬೇಕು. ಮಂಗಳೂರಿನ ಕ್ರೈಂ ಜಗತ್ತಿನ  ಆಳ ಅಗಲ ತಿಳಿದಿರುವ ಹಿರಿಯ ಪತ್ರಕರ್ತರ ಅಭಿಪ್ರಾಯ ಪಡೆದು ವಾಸ್ತವಾಂಶಗಳನ್ನು ಅರಿತು ಅಪರಾಧ ತಡೆಗೆ ಸೂಕ್ತ ಕ್ರಮವನ್ನು ಜರುಗಿಸಬೇಕು ಎನ್ನುವ ಒತ್ತಾಯಗಳು ಕೂಡ ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ