ಧರ್ಮಸ್ಥಳ | ಸರಣಿ ಹತ್ಯೆ, ಅತ್ಯಾಚಾರ ಕೇಸ್ : ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ!

ಮೈಸೂರು: ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದಲ್ಲಿ ಸರಣಿ ಹತ್ಯೆ, ಅತ್ಯಾಚಾರ ನಡೆಸಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ವ್ಯಕ್ತಿಯೊಬ್ಬರು ಸಾಕ್ಷಿ ಹೇಳಲು ಮುಂದೆ ಬಂದಿರುವ ಪ್ರಕರಣದ ತನಿಖೆ ಎಸ್ ಐಟಿ ತನಿಖೆಗೆ ನೀಡಬೇಕು ಎನ್ನುವ ಒತ್ತಾಯ ಹಾಗೇಯೇ ಉಳಿದಿದ್ದು, ಈ ಬಗ್ಗೆ ಇಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಧರ್ಮಸ್ಥಳ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಸೇರಿದಂತೆ ಅನೇಕರು ಎಸ್ ಐಟಿ ತನಿಖೆಗೆ ಆಗ್ರಹಿಸಿದ್ದರು. ಆದರೆ ಈ ಸಂಬಂಧ ಇಂದು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದು, ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ, ಎಸ್ ಐಟಿ ರಚನೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ತನಿಖೆ ವಿಷಯದಲ್ಲಿ ಯಾರ ಒತ್ತಡವೂ ನಡೆಯಲ್ಲ. ಕಾನೂನು ರೀತಿಯಲ್ಲೇ ಕ್ರಮ ಆಗಲಿದೆ ಎಂದಿದ್ದಾರೆ.
ಗೋಪಾಲಗೌಡ ಅವರು ಹೇಳಿದ್ದಕ್ಕೆ ,ಹೇಳದೇ ಇರೋದಕ್ಕೆ ಯಾವ ಪರನೂ ಇಲ್ಲ, ವಿರೋಧನೂ ಇಲ್ಲ, ಸರ್ಕಾರ ಕಾನೂನು ಪ್ರಕಾರ ಮಾಡಬೇಕು. ಎಸ್ ಐಟಿ ಮಾಡಬೇಕು ಅಂದ್ರೆ ಎಸ್ ಐಟಿ ಮಾಡ್ತೀವಿ. ಅವನು(ಸಾಕ್ಷಿ) ಏನು ಮಾಡಿದ್ದಾನೆ, 10 ವರ್ಷ ಅಪ್ಸ್ಕ್ಯಾಂಡ್ ಆಗಿಬಿಟ್ಟಿದ್ದ. ಪೊಲೀಸ್ ಮುಂದೆ 164 ಸ್ಟೇಟ್ ಮೆಂಟ್ ಕೊಟ್ಟಿದ್ದಾನೆ. ಆ ಹೇಳಿಕೆಯಲ್ಲಿ ಏನು ಹೇಳಬೇಕೋ ಎಲ್ಲ ಹೇಳಿದ್ದಾನೆ. ನಾನೇ ಹೂತು ಹಾಕಿದ್ದೀನಿ ಅಂತ ಹೇಳಿದ್ದಾನೆ. ಹೂತು ಹಾಕಿರುವ ಜಾಗಕ್ಕೆ ಹೋಗಿ ಹೆಣಗಳನ್ನು ತೋರಿಸ್ತೀನಿ ಅಂದಿದ್ದಾನೆ. ಪೊಲೀಸ್ ನವರು ಏನು ಹೇಳುತ್ತಾರೆ ನೋಡೋಣ, ಇವತ್ತು ನಾಳೆ ಒಳಗಡೆ ಎಂದು ಅವರು ಹೇಳಿದರು.
ಸರ್ಕಾರದ ಮೇಲೆ ಯಾವುದಾದರೂ ಒತ್ತಡ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಒತ್ತಡವೂ ಇಲ್ಲ, ಒತ್ತಡ ಹಾಕಿದ್ರೂ ನಾವು ಯಾರ ಮಾತೂ ಕೇಳಲ್ಲ, ಕಾನೂನು ರೀತಿಯಲ್ಲಿ ಮಾಡ್ತೀವಿ ಎಂದು ಹೇಳಿದರು.
ಈ ಪ್ರಕರಣದ ತನಿಖಾಧಿಕಾರಿಗಳನ್ನು ಬದಲಿಸಬೇಕು ಎಂದು ವಕೀಲರುಗಳು, ಸಾಮಾಜಿಕ ಹೋರಾಟಗಾರರು ಡಿಜಿಟಲ್ ಮೀಡಿಯಾ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೆ ನೀಡುತ್ತಿದ್ದು, ಹಲವಾರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ವ್ಯಕ್ತಿ ತಾನು ಹೂತು ಹಾಕಿದ ಮೃತದೇಹಗಳನ್ನು ಹೊರ ತೆಗೆಯುತ್ತೇನೆ ಎಂದು ಹೇಳಿಕೆ ನೀಡಿದ್ದರೂ, ಈವರೆಗೂ ಯಾವುದೇ ಕ್ರಮಗಳು ಆಗಿಲ್ಲ, ಹೀಗಾಗಿ ಎಸ್ ಐಟಿ ತನಿಖೆಗೆ ಜನ ಆಗ್ರಹಿಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: