ಧರ್ಮಸ್ಥಳ: 13 ಜಾಗಗಳನ್ನು ಗುರುತಿಸಿದ ಸಾಕ್ಷಿ ದೂರುದಾರ: ನಿನ್ನೆ ಸಂಜೆವರೆಗೆ ಏನೆಲ್ಲ ನಡೆಯಿತು?
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೂರಾರು ಶವಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಾಕ್ಷಿ ದೂರುದಾರ, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ 13 ಜಾಗಗಳನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ ಐಟಿ) ತೋರಿಸಿದ್ದಾರೆ.
ಮುಖಕ್ಕೆ ಮುಸುಕು ಹಾಕಿದ್ದ ಸಾಕ್ಷಿ ದೂರುದಾರ ತೋರಿಸಿದ ಒಂದೊಂದು ಜಾಗದ ಜಿಪಿಎಸ್ ಗುರುತುಗಳನ್ನು ದಾಖಲಿಸಿಕೊಂಡ ಎಸ್ ಐಟಿ ಅಧಿಕಾರಿಗಳು ಅಲ್ಲಿ ಕೆಂಪು ರಿಬ್ಬನ್ ಕಟ್ಟಿದರು. ಆತ ತೋರಿಸುತ್ತಾ ಹೋದ ಪ್ರತಿ ಜಾಗವನ್ನೂ ನಿರ್ದಿಷ್ಟ ಸಂಖ್ಯೆಯ ಮೂಲಕ ಗುರುತು ಮಾಡಿದರು.
ಎಸ್ ಐಟಿ ಅಧಿಕಾರಿಗಳು, ವಿಧಿ ವಿಜ್ಞಾನ ತಜ್ಞರು (ಸೀನ್ ಅಫ್ ಕ್ರೈಂ ಅಧಿಕಾರಿಗಳು) ಹಾಗೂ ಭದ್ರತಾ ಸಿಬ್ಬಂದಿ ಸಾಕ್ಷಿ ದೂರುದಾರನ ಜೊತೆ ಸುಮಾರು ಎರಡು ಕಿ.ಮೀ. ದೂರದ ಮುಂಡಾಜೆ ಮೀಸಲು ಅರಣ್ಯಕ್ಕೆ ಸೇರಿದ ಕಾಡಿನಲ್ಲಿ ಅಲೆದರು. ಎಸ್ ಐಟಿಯ ಸಿಬ್ಬಂದಿ ಆತ ತೋರಿಸಿದ ಜಾಗಗಳ ವಿಡಿಯೊ ಚಿತ್ರೀಕರಣ ಮಾಡಿಕೊಂಡರು.
ಸಾಕ್ಷಿ ದೂರುದಾರ ಸೋಮವಾರ ತೋರಿಸಿರುವ 13 ಜಾಗಗಳೂ ಧರ್ಮಸ್ಥಳ ಪೊಲೀಸ್ ಠಾಣೆಯಿಂದ 1 ಕಿ.ಮೀ. ವ್ಯಾಪ್ತಿಯ ಕಾಡಿನಲ್ಲಿವೆ. ಮೊದಲು ತೋರಿಸಿದ ಎಂಟು ಜಾಗಗಳು ನೇತ್ರಾವತಿ ನದಿ ದಂಡೆಯಲ್ಲಿದ್ದರೆ, ಉಳಿದ ನಾಲ್ಕು ಜಾಗಗಳು ನೇತ್ರಾವತಿ ಸೇತುವೆಯಿಂದ ಸ್ನಾನಘಟ್ಟದ ಕಡೆಗೆ ರಾಜ್ಯ ಹೆದ್ದಾರಿ–37ರ ಪಕ್ಕದಲ್ಲಿವೆ. ಒಂದು ಜಾಗ ಮಾತ್ರ ಸ್ನಾನಘಟ್ಟ ಸಮೀಪದ ಕಿರು ಅಣೆಕಟ್ಟೆಯ ಪಕ್ಕದ ಬಯಲು ಜಾಗದಲ್ಲಿದೆ. ಒಟ್ಟು 13 ಜಾಗಗಳನ್ನು ಗುರುತಿಸುವ ಪ್ರಕ್ರಿಯೆ ಮುಗಿಸುವಷ್ಟರಲ್ಲಿ ಸಂಜೆಯಾಗಿತ್ತು. ಸ್ನಾನಘಟ್ಟದ ಬಳಿ ನೇತ್ರಾವತಿ ನದಿಯ ಆಚೆ ಬದಿಯಲ್ಲೂ ಜಾಗವನ್ನು ಗುರುತಿಸಬೇಕಿತ್ತು. ಸೇತುವೆ ಮೂಲಕ ಸಾಗಿ ಕನ್ಯಾಡಿ ಬಳಿಯ ರಸ್ತೆ ಮೂಲಕ ನದಿಯ ಇನ್ನೊಂದು ಬದಿಗೆ ಸಾಕ್ಷಿ ದೂರುದಾರರನ್ನು ಕರೆದೊಯ್ಯುವಷ್ಟರಲ್ಲಿ ಸಂಜೆ 6 ಗಂಟೆ ದಾಟಿತ್ತು. ಜೋರಾಗಿ ಮಳೆ ಸುರಿಯಿತಲ್ಲದೇ, ಕತ್ತಲು ಅವರಿಸಿತ್ತು. ಹಾಗಾಗಿ ಜಾಗಗಳ ಹುಡುಕಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯಿತು. ಸ್ಥಳಕ್ಕೆ ಬಂದು ಅಲ್ಲಿಂದ ನಿರ್ಗಮಿಸುವರೆಗೂ ಸಾಕ್ಷಿ ದೂರುದಾರರ ಮುಖಕ್ಕೆ ಕವಚ ಹಾಕಿ ಗುರುತು ಮರೆಮಾಚಲಾಗಿತ್ತು. ಆತನನ್ನು ಸ್ನಾನಘಟ್ಟದವರೆಗೆ ಕರೆದೊಯ್ಯುವವರೆಗೆ ಐವರು ವಕೀಲರ ತಂಡ ಜೊತೆಗಿತ್ತು. ಕಾಡಿನ ಒಳಗೆ ಕರೆದೊಯ್ದಾಗ ವಕೀಲರು ಜೊತೆಯಲ್ಲಿ ಇರಲಿಲ್ಲ.
ವಿಶೇಷ ತನಿಖಾ ತಂಡದ ಡಿಐಜಿ ಎಂ.ಎನ್.ಅನುಚೇತ್ ಅವರು ಬೆಳ್ತಂಗಡಿಯ ಎಸ್ ಐಟಿ ಕಚೇರಿಗೆ ಭೇಟಿ ನೀಡಿ ತನಿಖೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಅಂತರಿಕ ಭದ್ರತಾ ವಿಭಾಗದ ಎಸ್.ಪಿ.ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಎಸ್.ಪಿ ಸಿ.ಎ.ಸೈಮನ್ ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ಸಾಕ್ಷಿ ದೂರುದಾರರನ್ನು ಮಂಗಳೂರಿನ ಮಲ್ಲಿಕಟ್ಟೆಯ ಪ್ರವಾಸಿ ಬಂಗಲೆಯಲ್ಲಿ ಎಸ್ ಐಟಿ ಅಧಿಕಾರಿಗಳು ಶನಿವಾರ ಮತ್ತು ಭಾನುವಾರ ವಿಚಾರಣೆಗೆ ಒಳಪಡಿಸಿದ್ದರು. ಎಸ್ ಐಟಿ ಮುಖ್ಯಸ್ಥರಾಗಿರುವ ಅಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರು ತನಿಖೆಯ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಭಾನುವಾರ ಮಾರ್ಗದರ್ಶನ ಮಾಡಿದ್ದರು.
ಗರುಡ ಪಡೆ ಹಾಗೂ ವಿಶೇಷ ಕಾರ್ಯಪಡೆಯ ತರಬೇತಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭದ್ರತೆಗಾಗಿ ಬಳಸಲಾಗಿತ್ತು. ಸಾಕ್ಷಿ ದೂರುದಾರ ಜಾಗವನ್ನು ತೋರಿಸುವಾಗ ಈ ಪಡೆಗಳ ಸಿಬ್ಬಂದಿ ರೈಫಲ್ ಹಿಡಿದುಕೊಂಡೇ ಭದ್ರತೆ ಒದಗಿಸಿದರು. ಸಾಕ್ಷಿ ದೂರುದಾರರನ್ನು ಕಾಡಿನ ಒಳಗೆ ಕರೆದೊಯ್ಯುವಾಗ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಲಾಯಿತು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಒಂದು ತುಕಡಿಯನ್ನು ಭದ್ರತೆಗಾಗಿ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಸ್ನಾನಘಟ್ಟದ ಬಳಿ ಇದ್ದ ಸಾರ್ವಜನಿಕರನ್ನು ಪೊಲೀಸರು ಆಚೆಗೆ ಕಳುಹಿಸಿದರು. ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಜಾಗದತ್ತ ಸಾರ್ವಜನಿಕರು ಹೋಗುವುದನ್ನು ತಡೆಯಲು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಬಯಲು ಪ್ರದೇಶದ ಜಾಗ ಗುರುತಿಸುವ ಪ್ರಕ್ರಿಯೆಯನ್ನು ಡೋನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಯಿತು. ಆದರೆ ಕಾಡಿನ ಒಳಗೆ ಬಾನೆತ್ತರ ಬೆಳೆದ ಮರಗಳ ನಡುವಿನ ಜಾಗಗಳನ್ನು ಗುರುತಿಸುವಾಗ ಡೋನ್ ಚಿತ್ರೀಕರಣ ಸಾಧ್ಯವಾಗಲಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























