ಸರ್ಕಾರ ಅರ್ಚಕನ ವೇತನ ವಾಪಸ್ ಕೇಳಿತೇ?: ಸತ್ಯ ಮುಚ್ಚಿಟ್ಟ ಮಾಧ್ಯಮಗಳು!

ಚಿಕ್ಕಮಗಳೂರು: ಅರ್ಚಕರೊಬ್ಬರ ವೇತನ ವಾಪಸ್ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಮುಖ ಮಾಧ್ಯಮಗಳು ಏಕಪಕ್ಷೀಯ ವರದಿಗಳನ್ನು ಪ್ರಕಟಿಸಿದ್ದು, ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿರುವುದು ಕಂಡು ಬಂದಿದೆ.
ಚಿಕ್ಕಮಗಳೂರಿನ ಕೋದಂಡರಾಮ ದೇಗುಲದ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ವೇತನವನ್ನು ಸರ್ಕಾರ ವಾಪಸ್ ಕೇಳಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದ್ರೆ ವಾಸ್ತವವಾಗಿ, ಅರ್ಚಕನ ಖಾತೆಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನಕ್ಕಿಂತಲೂ ಅಧಿಕ ಮೊತ್ತವನ್ನು ನೆಫ್ಟ್ ಮಾಡಲಾಗಿದೆ. ಹೀಗಾಗಿ ಹೆಚ್ಚುವರಿಯಾಗಿ ನೆಫ್ಟ್ ಮಾಡಲಾಗಿರುವ ಹಣವನ್ನು ಸರ್ಕಾರಕ್ಕೆ ವಾಪಸ್ ಪಾವತಿಸಬೇಕು ಎಂದು ಕಾನೂನು ರೀತಿಯಲ್ಲಿ ಕೇಳಲಾಗಿದೆ.
ಅರ್ಚಕರ ವೇತನಕ್ಕಿಂತಲೂ ಅಧಿಕವಾಗಿ 4,74,000 ಮೊತ್ತವನ್ನು ಈವರೆಗೆ ಹಾಕಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ನೀಡಿದೆ. ಅರ್ಚಕನ ವೇತನವನ್ನು ಸರ್ಕಾರ ವಾಪಸ್ ಕೇಳಿಲ್ಲ, ಸರ್ಕಾರದಿಂದ ಹೆಚ್ಚುವರಿಯಾಗಿ ಕಸಿದುಕೊಂಡಿರುವ ಹಣವನ್ನು ಸರ್ಕಾರ ವಾಪಸ್ ಕೇಳಿದೆ.
ವಾಸ್ತವವಾಗಿ ಅಧಿಕ ಮೊತ್ತವನ್ನು ಪಡೆದ ಅರ್ಚಕ ಮತ್ತು ಲೆಕ್ಕಕ್ಕಿಂತ ಅಧಿಕಮೊತ್ತವನ್ನು ಅರ್ಚಕನ ಖಾತೆಗೆ ನೆಫ್ಟ್ ಮಾಡಿದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು. ಮಾತ್ರವಲ್ಲದೇ ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಇಂತಹ ಪ್ರಕರಣಗಳು ಬೇರೆ ಸ್ಥಳಗಳಲ್ಲಿ ಕೂಡ ನಡೆಯುತ್ತಿದೆಯೇ ಎನ್ನುವುದನ್ನು ಪರಿಶೀಲನೆ ನಡೆಸಬೇಕಿದೆ.