ಹೆಡ್ ಮಾಸ್ಟರ್ ರನ್ನು ವರ್ಗಾವಣೆ ಮಾಡ್ಬೇಡಿ: ಇಡೀ ದಿನ ವಿದ್ಯಾರ್ಥಿಗಳ ಪ್ರತಿಭಟನೆ - Mahanayaka

ಹೆಡ್ ಮಾಸ್ಟರ್ ರನ್ನು ವರ್ಗಾವಣೆ ಮಾಡ್ಬೇಡಿ: ಇಡೀ ದಿನ ವಿದ್ಯಾರ್ಥಿಗಳ ಪ್ರತಿಭಟನೆ

10/07/2024


Provided by

ತಮಿಳುನಾಡಿನ ವೆಲ್ಲೂರಿನ ಚಿನ್ನ ಅಲ್ಲಾಪುರ ಎಂಬ ಪ್ರದೇಶದ ಸರಕಾರಿ ಶಾಲೆಯ ಮಕ್ಕಳು ನಿನ್ನೆ ಇಡೀ ದಿನ ಪ್ರತಿಭಟನೆ ನಡೆಸಿದ್ರು. ಈ ಮಕ್ಕಳ ಬೇಡಿಕೆ ಏನು ಗೊತ್ತೇ..? ನಮ್ಮ ಪ್ರೀತಿಯ ಹೆಡ್ ಮಾಸ್ಟರ್ ಎಸ್ ಸೆಂಥಿಲ್ ಕುಮಾರ್ ಅವರನ್ನು ಯಾವುದೇ ಕಾರಣಕ್ಕೂ ಈ ಶಾಲೆಯಿಂದ ವರ್ಗಾವಣೆ ಮಾಡಬಾರದು ಎಂಬುದಾಗಿತ್ತು. ಹಾಗಂತ ಈ ಕೋರಿಕೆ ಕೇವಲ ಮಕ್ಕಳದ್ದು ಮಾತ್ರವಲ್ಲ ಹೆತ್ತವರದ್ದು ಕೂಡ ಎಂಬುದೇ ವಿಶೇಷ.

ಈ ಸೆಂತಿಲ್ ಕುಮಾರ್ ಕೇವಲ ಹೆಡ್ ಮಾಸ್ಟರ್ ಮಾತ್ರ ಆಗಿರಲಿಲ್ಲ, ಮಕ್ಕಳ ಪಾಲಿಗೆ ಗೆಳೆಯ ಸಹೋದರ ಎಲ್ಲವೂ ಆಗಿದ್ದರು. ಮಕ್ಕಳ ಹೆತ್ತವರಿಗೂ ಅವರು ಬಹಳ ಪ್ರೀತಿಯ ವ್ಯಕ್ತಿಯಾಗಿದ್ದರು. ಕಳೆದ 11 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ವರ್ಗಾವಣೆಯ ಪತ್ರ ಬಂದಿರುವುದು ಮಕ್ಕಳಿಗೆ ಮತ್ತು ಹೆತ್ತವರಿಗೆ ಗೊತ್ತಾಗಿದೆ. ಇದರಿಂದ ಕಸಿವಿಸಿಕೊಂಡ ಹೆತ್ತವರು ಶಾಲೆಗೆ ಬಂದಿದ್ದಾರೆ. ಐದನೇ ತರಗತಿಯವರೆಗೆ ಇರುವ ಈ ಸರಕಾರಿ ಶಾಲೆಯಲ್ಲಿ 350ರಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಶಾಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಈ ನಡುವೆ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಮಾತ್ರ ಅಲ್ಲ ವರ್ಗಾವಣೆ ಕಡ್ಡಾಯವಲ್ಲ ಮತ್ತು ಹೆಡ್ ಮಾಸ್ಟರ್ ಅವರ ವಿನಂತಿಯ ಮೇರೆಗೆ ಈ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಎಲ್ಲಾ ಕೆಲಸಗಳನ್ನು ಮಾಡುವುದಕ್ಕೆ ನನ್ನ ಆರೋಗ್ಯ ಕೇಳುತ್ತಿಲ್ಲ, ಆದ್ದರಿಂದ ಇನ್ನೊಂದು ಪ್ರದೇಶದ ಸಣ್ಣ ಶಾಲೆಗೆ ತನ್ನನ್ನು ವರ್ಗಾಯಿಸಬೇಕು ಎಂದು 51 ವರ್ಷದ ಸೆಂತಿಲ್ ಕುಮಾರ್ ವಿನಂತಿಸಿರುವುದನ್ನು ಶಿಕ್ಷಣಾಧಿಕಾರಿಗಳು ಪೋಷಕರ ಗಮನಕ್ಕೆ ತಂದಿದ್ದಾರೆ. ಆದರೆ ಹೆತ್ತವರು ಈ ಸ್ಪಷ್ಟೀಕರಣವನ್ನು ಒಪ್ಪಲಿಲ್ಲ. ಸೆಂತಿಲ್ ಕುಮಾರ್ ಇಲ್ಲದ ಶಾಲೆಗೆ ನಮ್ಮ ಮಕ್ಕಳನ್ನು ನಾವು ಕಳುಹಿಸುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ. ಕೊನೆಗೆ ಸೆಂತಿಲ್ ಕುಮಾರ್ ತಮ್ಮ ನಿರ್ಧಾರ ಬದಲಿಸಿ ಇದೇ ಶಾಲೆಯಲ್ಲಿ ಉಳಿದುಕೊಳ್ಳುವುದಾಗಿ ಹೇಳಿದ ಬಳಿಕ ಪೋಷಕರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. 2011ರಲ್ಲಿ ಈ ಶಾಲೆಯಲ್ಲಿ ಕೇವಲ 131 ಮಕ್ಕಳು ಮಾತ್ರ ಇದ್ದರು. ಆದರೆ ಸೆಂತಿಲ್ ಕುಮಾರ್ ಅವರ ಶ್ರಮ ಮತ್ತು ಪ್ರಯತ್ನದ ಫಲವಾಗಿ 350 ಕ್ಕಿಂತಲೂ ಅಧಿಕ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 2022 ರಲ್ಲಿ ಈ ಶಾಲೆಗೆ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿ ಕೂಡ ಲಭಿಸಿತ್ತು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ