ಅತಿರೇಕದ ವರದಿಗಾರಿಕೆ ಬೇಡ: ಸೈರನ್ ಶಬ್ದ ಬಳಕೆ ಮಾಡಬೇಡಿ: ಸುದ್ದಿವಾಹಿನಿಗಳ ಅತಿರೇಕದ ವರದಿಗಾರಿಕೆಗೆ ಕಡಿವಾಣ - Mahanayaka

ಅತಿರೇಕದ ವರದಿಗಾರಿಕೆ ಬೇಡ: ಸೈರನ್ ಶಬ್ದ ಬಳಕೆ ಮಾಡಬೇಡಿ: ಸುದ್ದಿವಾಹಿನಿಗಳ ಅತಿರೇಕದ ವರದಿಗಾರಿಕೆಗೆ ಕಡಿವಾಣ

Siren sound
10/05/2025


Provided by

`ನವದೆಹಲಿ: ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಸನ್ನಿವೇಶ ಸೃಷ್ಟಿಯಾಗಿದೆ. ಈ ನಡುವೆ ಸುದ್ದಿವಾಹಿನಿಗಳ ಅತಿರೇಕದ ವರದಿಗಾರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

ಟಿವಿ ಚಾನೆಲ್ ಕಾರ್ಯಕ್ರಮಗಳಲ್ಲಿ ಸೈರನ್ ಬಳಕೆ ಮಾಡುತ್ತಿರುವುದರ ವಿರುದ್ಧ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದ್ದು, ನಾಗರಿಕರ ರಕ್ಷಣೆಗೆ ಬಳಸುವ ಸೈರನ್ಗಳನ್ನು ಟಿವಿ ಕಾರ್ಯಕ್ರಮಗಳಲ್ಲಿ ಬಳಸಬಾರದು ಎಂದು ಎಲ್ಲ ಚಾನೆಲ್ ಗಳಿಗೆ ನಿರ್ದೇಶನ ನೀಡಿದೆ.
ಸೈರನ್ಗಳ ನಿಯಮಿತ ಬಳಕೆಯು ವಾಯುದಾಳಿ ಸೈರನ್ಗಳ ಬಗ್ಗೆ ನಾಗರಿಕರ ಸೂಕ್ಷ್ಮತೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ದಾಳಿ ನಡೆದಾಗ ಸೈರನ್ ಮೊಳಗಿಸಿದರೆ ಮಾಧ್ಯಮಗಳಲ್ಲಿ ಬರುವ ಶಬ್ದ ಎಂದು ನಾಗರಿಕರು ಅಂದುಕೊಳ್ಳುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ಟಿವಿ ವಾಹಿನಿಗಳಿಗೆ ಬುದ್ಧಿ ಹೇಳಲಾಗಿದೆ.

ಇನ್ನೂ ಮಾಧ್ಯಮ ಪ್ರತಿನಿಧಿಗಳನ್ನು ಶುಕ್ರವಾರ ಭೇಟಿಯಾಗಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಭಾರತ ಹಾಗೂ ಪಾಕಿಸ್ತಾನ ನಡುವಣ ಸೇನಾ ಸಂಘರ್ಷದ ಸಂದರ್ಭದಲ್ಲಿ ವಾಸ್ತವ ವರದಿಗಳನ್ನು ಪ್ರಕಟಿಸುವಂತೆ ಮನವಿ ಮಾಡಿದ್ದರು. ಇದೇ ವೇಳೆ ಅವರು, ಜವಾಬ್ದಾರಿಯುತ ವರದಿಗಾರಿಕೆಯ ಮಹತ್ವವನ್ನು ಪ್ರತಿಪಾದಿಸಿದ್ದರು.

ಮುದ್ರಣ ಮಾಧ್ಯಮಗಳ ಸಂಪಾದಕರೊಂದಿಗೆ ಸಂವಹನ ನಡೆಸಿರುವ ವೈಷ್ಣವ್, ಸಂಘರ್ಷಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಪ್ರಕಟಿಸುವುದಕ್ಕೂ ಮುನ್ನ ಮಾಹಿತಿಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದರು. ರಕ್ಷಣಾ ಕಾರ್ಯಾಚರಣೆ ಹಾಗೂ ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರ ಮಾಡುವುದನ್ನು ವಿದ್ಯುನ್ಮಾನ ಮಾಧ್ಯಮಗಳು ನಿಲ್ಲಿಸಬೇಕು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ