ಮಕ್ಕಳ ಜೊತೆ ಕುಳಿತು ನಾನು ಟಿವಿ ನೋಡಲು ಸಾಧ್ಯವೇ?

- ಸಿದ್ಧಾರ್ಥ್ ಬಿ., ಬೆಂಗಳೂರು
ನನಗೆ ಟಿವಿ ಕಾರ್ಯಕ್ರಮ(TV Show)ಗಳನ್ನು ನೋಡುವುದು ಎಂದರೆ ಬಹಳ ಇಷ್ಟ, ಹಿಂದಿನ ಕಾಲದಿಂದಲೂ ಕುಟುಂಬ ಸಮೇತವಾಗಿ ಟಿವಿ ನೋಡುವುದು, ಮನರಂಜನೆ ಪಡೆಯುವುದು ಮಾಡಿಕೊಂಡು ಬರುತ್ತಿದ್ದೇವೆ. ಹಿಂದಿನ ಕಾಲದ ಉದಯ ಟಿವಿ, ಚಂದನ, ಈ ಟಿವಿ ಮೊದಲಾದ ಚಾನೆಲ್ ಗಳಲ್ಲಿ ಬರುತ್ತಿದ್ದ ಕಾರ್ಯಕ್ರಮಗಳನ್ನು ಫ್ಯಾಮಿಲಿ ಜೊತೆಗೆ ಕೂತು ನೋಡುತ್ತಿದ್ದೆವು. ಆಗಲೂ ಹಾಸ್ಯ ಭರಿತ ಕಾರ್ಯಕ್ರಮಗಳು ಪ್ರಸಾರ ಆಗುತ್ತಿದ್ದವು. ಆ ಸಮಯಕ್ಕಾಗಿ ಕಾಯುತ್ತಿದ್ದ ದಿನಗಳು ಬಹಳಷ್ಟಿವೆ.
ಅಜ್ಜಿ, ತಾತಾ, ಮೊಮ್ಮಕ್ಕಳು, ಮರಿ ಮಕ್ಕಳು ಹೀಗೆ ಎಲ್ಲಾ ವಯಸ್ಸಿನವರೂ ಟಿವಿ ನೋಡುತ್ತಿದ್ದೆವು. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಟೈಗರ್ ಪ್ರಭಾಕರ್ ಇವರ ಸಿನಿಮಾಗಳು ಬಂತೆಂದರೆ ಸಾಕು ಆ ದಿನ ಮನೆಯಲ್ಲಿ ಸಂಭ್ರಮದಲ್ಲಿ ತೇಲಾಡುತ್ತಿದ್ದೆವು. ಅಂತಹ ಸಂಭ್ರಮಗಳು ಇನ್ನೆಂದಿಗೂ ಪಡಲು ಸಾಧ್ಯವೇ?
ಈಗಿನ ಕಾಲದಲ್ಲಿಯೂ ಸಾಕಷ್ಟು ಮನರಂಜನೆ ನೀಡುವ ಚಾನೆಲ್ ಗಳಿವೆ. ಆನ್ ಲೈನ್ ನಲ್ಲಿ ನೋಡುವವರ ಸಂಖ್ಯೆ ಹೆಚ್ಚಾದರೂ, ಮನೆಯಲ್ಲಿ ಟಿವಿಯಲ್ಲಿ ಕಾರ್ಯಕ್ರಮ ನೋಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ ಕೆಲವೊಂದು ಕಾರ್ಯಕ್ರಮಗಳ ಸ್ವರೂಪಗಳು ಬದಲಾಗಿವೆ. ಹಿಂದಿನಂತೆ ನಾನು ನನ್ನ ಕುಟುಂಬದೊಂದಿಗೆ ಟಿವಿ ನೋಡಲು ನನಗೆ ತುಂಬಾ ಮುಜುಗರವಾಗುತ್ತದೆ. ಹಾಸ್ಯ ಕಾರ್ಯಕ್ರಮ(Comedy show)ಗಳೆಂದರೆ ನಮ್ಮ ಕುಟುಂಬಕ್ಕೆ ಬಹಳ ಇಷ್ಟವಾಗುತ್ತಿತ್ತು. ಆದರೆ, ಈಗೀಗ ಟಿವಿ ಚಾನೆಲ್ ಗಳಲ್ಲಿ ಬರುತ್ತಿರುವ ಹಾಸ್ಯ ಕಾರ್ಯಕ್ರಮಗಳಲ್ಲಿ ಬಳಸುವ ಭಾಷೆಗಳು, ಸೊಂಟದ ಕೆಳಗಿನ ಪದಗಳು, ಮಕ್ಕಳ ಮುಂದೆ ನನ್ನನ್ನು ಮುಜುಗರಕ್ಕೀಡು ಮಾಡಿವೆ.
ಇದು ಒಂದು ಚಾನೆಲ್ ನ ವಿಚಾರವಲ್ಲ, ಒಂದು ಚಾನೆಲ್ ನಲ್ಲಿ ಹೀಗೆ ಅಂತ ಇದ್ರೆ, ಇನ್ನೊಂದು ಚಾನೆಲ್ ನೋಡಿದರೆ, ಅದು ಅದಕ್ಕಿಂತಲೂ ಕೆಟ್ಟದಾಗಿರುತ್ತದೆ. ಅದಲ್ಲದೇ ಅಂತಹ ಭಾಷೆಯನ್ನು ಬಳಸಿ ಯಾರು ಮಾತನಾಡುತ್ತಾರೋ, ಅಂತಹ ಕಲಾವಿದರಿಗೇ ಮತ್ತೆ ಮತ್ತೆ ಅವಕಾಶಗಳನ್ನು ಟಿವಿ ಚಾನೆಲ್ ನವರು ನೀಡುತ್ತಾರೆ. ಎಲ್ಲಾ ಕಾರ್ಯಕ್ರಮಗಳಲ್ಲೂ ಅದೇ ಕಲಾವಿದರು. ಒಂದು ಚಾನೆಲ್ ನಿಂದ ಇನ್ನೊಂದು ಚಾನೆಲ್ ನೋಡಿದರೆ, ಆ ಚಾನೆಲ್ ನಲ್ಲೂ ಅಂತಹದ್ದೇ ಕಲಾವಿದರು. ಕಲಾವಿದರ ವಿಷಯ ಬಿಡೋಣ, ಆ ಕಾರ್ಯಕ್ರಮದಲ್ಲಿರುವ ಜಡ್ಜ್ ಗಳು ಕಲಾವಿದರಿಗಿಂದಲೂ ಕೀಳಾದ ಭಾಷೆಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಹಾಸ್ಯಗಳೆಂದರೆ ಇದೇನಾ? ಇಂತಹ ಕಾರ್ಯಕ್ರಮಗಳಿಗೆಲ್ಲ ಸ್ಕ್ರಿಪ್ಟ್ ಬರೆಯುವವರು ಯಾರು? ಡಬ್ಬಲ್ ಮೀನಿಂಗ್ ಬಳಕೆ ಮಾಡದೇ ಹಾಸ್ಯ ಮಾಡಲು ಸಾಧ್ಯವೇ ಇಲ್ಲವೇ? ನಿಜಕ್ಕೂ ಇದು ದುರಂತ.
ನಾನು ನನ್ನ ಮಗಳ ಜೊತೆಗೆ ಕುಳಿತು ಮನೆಯಲ್ಲಿ ಹೇಗೆ ಡಬಲ್ ಮೀನಿಂಗ್(Double meaning), ಸೊಂಟದ ಕೆಳಗಿನ ವಿಚಾರದ ಕಾಮಿಡಿಗೆ ನಗಲಿ? ವಯಸ್ಸಿಗೆ ಬಂದಿರುವ ಗಂಡು ಮಕ್ಕಳ ಜೊತೆಗೆ ಕುಳಿತು ನನ್ನ ಶ್ರೀಮತಿ ಹೇಗೆ ಟಿವಿ ಕಾರ್ಯಕ್ರಮಗಳನ್ನು ನೋಡಬೇಕು? ನನ್ನ ವಯಸ್ಸಾದ ತಂದೆ ಹೇಗೆ ಡಬಲ್ ಮೀನಿಂಗ್ ಡೈಲಾಗ್ ಗಳನ್ನು ಹೇಗೆ ಕೇಳಬೇಕು? ಟಿವಿ ಕಾರ್ಯಕ್ರಮ ಆಯೋಜಕರು ಇದರ ಬಗ್ಗೆ ಗಮನವಿಡಬೇಕು. ಹಾಸ್ಯದಲ್ಲಿ ಡಬಲ್ ಮೀನಿಂಗ್ ಜೋಕ್ ಗಳನ್ನು ಟಿವಿ ಚಾನೆಲ್ ಗಳ ಮುಖ್ಯಸ್ಥರೇ ಬ್ಯಾನ್ ಮಾಡಲಿ, ನಿಮ್ಮ ನೈತಿಕತೆ ತೋರಿಸಿ, ಉತ್ತಮ ಕಾರ್ಯಕ್ರಮಗಳನ್ನು ನೀಡಿ, ನಾವು ನಿಮ್ಮಿಂದ ಅದನ್ನು ನಿರೀಕ್ಷಿಸುತ್ತೇವೆ. ಕಲಾವಿದರ ಬಾಯಿಂದ ಒಳ್ಳೊಳ್ಳೆ ಪದಗಳನ್ನು ಹೇಳಿಸಿ, ನಮ್ಮ ಮಕ್ಕಳು ಅದನ್ನು ಕೇಳಿ ಅನುಸರಿಸಲಿ, ಕೆಟ್ಟ ಪದಗಳನ್ನು ಮಕ್ಕಳು ಕಲಿಯದಿರಲಿ…
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD