ಮನೆಗೆ ನುಗ್ಗಿ ಬಿಜೆಪಿ ನಾಯಕ ಮತ್ತು ಅವರ ಪತ್ನಿಯ ಬರ್ಬರ ಹತ್ಯೆ

ಮಧ್ಯಪ್ರದೇಶ: ಮನೆಗೆ ನುಗ್ಗಿ ಬಿಜೆಪಿ ನಾಯಕ ಮತ್ತು ಅವರ ಪತ್ನಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.
ಮೃತರನ್ನು ಬಿಜೆಪಿ ಮುಖಂಡ ರಾಮ್ನಿವಾಸ್ ಕುಮಾವತ್ ಮತ್ತು ಅವರ ಪತ್ನಿ ಮುನ್ನಿಬಾಯಿ ಎಂದು ಗುರುತಿಸಲಾಗಿದೆ.
ದೇವಾಸ್ ರಸ್ತೆಯ ಪಿಪ್ಲೋಡಾ ಗ್ರಾಮದಲ್ಲಿ ವಾಸಿಸುತ್ತಿದ್ದ ಮಾಜಿ ಸರಪಂಚ್ ಮತ್ತು ಬಿಜೆಪಿ ಮುಖಂಡ ರಾಮ್ನಿವಾಸ್ ಕುಮಾವತ್ ಮತ್ತು ಅವರ ಪತ್ನಿ ಮುನ್ನಿಬಾಯಿ ಅವರನ್ನು ಹತ್ಯೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮೃತದೇಹಗಳನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಉಜ್ಜಯಿನಿ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಪ್ರಾಥಮಿಕ ತನಿಖೆಯ ನಂತರ, ದರೋಡೆಗಾಗಿ ಈ ಎರಡು ಕೊಲೆಗಳು ನಡೆದಿವೆ ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಸಹ ಮುರಿದಿರುವುದು ಕಂಡುಬಂದಿದೆ.
ಕುಮಾವತ್ ಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಅವರಲ್ಲಿ ಯಾರೂ ಕೂಡ ಇವರ ಗ್ರಾಮದಲ್ಲಿ ವಾಸಿಸುತ್ತಿರಲಿಲ್ಲ ಎಂದು ನರ್ವಾರ್ ಪೊಲೀಸ್ ಠಾಣೆಯ ಪ್ರಭಾರಿ ಮುಖೇಶ್ ಇಜರ್ದಾರ್ ತಿಳಿಸಿದ್ದಾರೆ.
ಹಂತಕರು ಮನೆಯ ಹಿಂಬಾಗಲಿನ ಮೂಲಕ ಮನೆಯೊಳಗೆ ಎಂಟ್ರಿಯಾಗಿದ್ದಾರೆ. ಮೊದಲು ಕುಮಾವತ್ ಅವರ ಪತ್ನಿಯನ್ನು ಹತ್ಯೆ ಮಾಡಿದ್ದಾರೆ. ಆ ಬಳಿಕ ಕುಮಾವತ್ ಅವರನ್ನು ಹತ್ಯೆ ಮಾಡಿದ್ದಾರೆ. ಸ್ಥಳದಲ್ಲಿ ಗುಂಡಿನ ದಾಳಿ ನಡೆದಿರೋದರ ಯಾವುದೇ ಕುರುಹುಗಳಿಲ್ಲ, ಇರಿದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.