ಸತ್ತ ಹಾವು ತೋರಿಸಿ ಪೊಲೀಸರನ್ನು ಹೆದರಿಸಿ ಎಸ್ಕೇಪ್ ಆದ ಕುಡುಕ ಆಟೋ ಚಾಲಕ!
ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್ ನಲ್ಲಿ ವಿಚಿತ್ರ ಹಾಗೂ ಅಷ್ಟೇ ಆಘಾತಕಾರಿ ಘಟನೆಯೊಂದು ನಡೆದಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಆಟೋ ಚಾಲಕನೊಬ್ಬ, ತನ್ನನ್ನು ತಡೆದ ಸಂಚಾರಿ ಪೊಲೀಸರಿಗೆ ಸತ್ತ ಹಾವನ್ನು ತೋರಿಸಿ ಬೆದರಿಕೆ ಹಾಕಿ, ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ನಡೆದಿದ್ದೇನು? ಹೈದರಾಬಾದ್ ನ ಚಂದ್ರಯಾನಗುಟ್ಟ (Chandrayangutta) ಪ್ರದೇಶದಲ್ಲಿ ಶನಿವಾರ ರಾತ್ರಿ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಇರ್ಫಾನ್ ಎಂಬ ಆಟೋ ಚಾಲಕ ಮದ್ಯಪಾನ ಮಾಡಿ ಆಟೋ ಚಲಾಯಿಸುತ್ತಿರುವುದು ಪತ್ತೆಯಾಗಿದೆ. ಪೊಲೀಸರು ಆತನನ್ನು ಪರಿಶೀಲಿಸಿದ ವೇಳೆ ಆತ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ನಿಯಮದಂತೆ ಪೊಲೀಸರು ಆತನ ಆಟೋವನ್ನು ವಶಕ್ಕೆ ಪಡೆದು (Seize), ಅದನ್ನ ಪೊಲೀಸ್ ಠಾಣೆಗೆ ಕೊಂಡೊಯ್ಯಲು ಮುಂದಾದರು.
ಸತ್ತ ಹಾವು ತೋರಿಸಿ ಬೆದರಿಕೆ: ಪೊಲೀಸರು ತನ್ನ ಆಟೋವನ್ನು ವಶಕ್ಕೆ ಪಡೆದಿದ್ದರಿಂದ ಕೆರಳಿದ ಇರ್ಫಾನ್, ಆಟೋದಲ್ಲಿದ್ದ ಸತ್ತ ಹಾವನ್ನು ಹೊರತೆಗೆದು ಪೊಲೀಸರತ್ತ ಬೀಸಿದ್ದಾನೆ. “ನನ್ನ ಆಟೋವನ್ನು ಈಗಲೇ ಬಿಡಿ, ಇಲ್ಲವಾದರೆ ಈ ಹಾವಿನಿಂದ ಕಚ್ಚಿಸುತ್ತೇನೆ” ಎಂದು ಪೊಲೀಸರನ್ನು ಹೆದರಿಸಲು ಯತ್ನಿಸಿದ್ದಾನೆ. ಇರ್ಫಾನ್ ಕೈಯಲ್ಲಿದ್ದ ಹಾವು ಸತ್ತಿದ್ದರೂ ಸಹ, ಆ ಕ್ಷಣದಲ್ಲಿ ಪೊಲೀಸರು ಆತನ ವರ್ತನೆಯಿಂದ ಗಾಬರಿಗೊಂಡಿದ್ದಾರೆ.
ಪೊಲೀಸರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ, ಇರ್ಫಾನ್ ಅಲ್ಲಿಂದ ಓಡಿ ಹೋಗಿದ್ದಾನೆ. ಈ ಇಡೀ ದೃಶ್ಯವನ್ನು ಅಲ್ಲಿ ನೆರೆದಿದ್ದವರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಚಂದ್ರಯಾನಗುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಲ್ಲದೆ, ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಇರ್ಫಾನ್‌ಗಾಗಿ ತಲಾಶ್ ನಡೆಸುತ್ತಿದ್ದಾರೆ. ಆತನ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























