ಅಬಕಾರಿ ನೀತಿ ಪ್ರಕರಣ: ದೆಹಲಿ ಸಿಎಂಗೆ ಇಡಿ ಸಮನ್ಸ್ ಜಾರಿ; ಮೋದಿಗೆ ಅರವಿಂದ್ ಕೇಜ್ರಿವಾಲ್ ಭಯ ಎಂದ ಎಎಪಿ..!

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಡಿಸೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಹೊಸ ಸಮನ್ಸ್ ನೀಡಿದೆ. ಇತ್ತ ಇದಕ್ಕೆ ಆಮ್ ಆದ್ಮಿ ಪಕ್ಷ (ಎಎಪಿ) ಇಂದು ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ದೆಹಲಿ ಮುಖ್ಯಮಂತ್ರಿಗೆ ಹೆದರುತ್ತಿದ್ದಾರೆ ಎಂದು ಹೇಳಿದೆ.
ನವೆಂಬರ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಮೊದಲು ಕರೆದಿತ್ತು. ಆದರೆ ನೋಟಿಸ್ ‘ಅಸ್ಪಷ್ಟ, ಪ್ರೇರಿತ ಮತ್ತು ಕಾನೂನಿನಲ್ಲಿ ಸಮರ್ಥನೀಯವಲ್ಲ’ ಎಂದು ಆರೋಪಿಸಿ ಅವರು ಹಾಜರಾಗಿರಲಿಲ್ಲ. ತಮ್ಮ ಮುಂದೆ ಶರಣಾಗುವವರಿಗೆ ಮೋದಿ ಕ್ಲೀನ್ ಚಿಟ್ ನೀಡುತ್ತಾರೆ ಎಂದು ಎಎಪಿ ನಾಯಕ ಸಂದೀಪ್ ಪಾಠಕ್ ಹೇಳಿದ್ದಾರೆ.
ಮೋದಿ ಅವರು ಅರವಿಂದ್ ಕೇಜ್ರಿವಾಲ್ ರಿಗೆ ಹೆಚ್ಚು ಹೆದರುತ್ತಾರೆ. ಚುನಾವಣೆಯಲ್ಲಿ ಕೇಜ್ರಿವಾಲ್ ಅವರನ್ನು ಸೋಲಿಸಲು ಸಾಧ್ಯವಾಗದ ಕಾರಣ, ಅವರು ಪಿತೂರಿಯನ್ನು ಮಾಡುತ್ತಿದ್ದಾರೆ. ಮೋದಿ ಅವರ ಮುಂದೆ ಶರಣಾದವರಿಗೆ ಎಲ್ಲಾ ಪ್ರಕರಣಗಳಲ್ಲಿ ಕ್ಲೀನ್ ಚಿಟ್ ನೀಡಲಾಗುತ್ತದೆ. ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಸತ್ಯೇಂದರ್ ಜೈನ್ ಇಂದು ಬಿಜೆಪಿಗೆ ಸೇರಿದರೆ, ಅವರಿಗೂ ಕ್ಲೀನ್ ಚಿಟ್ ನೀಡಲಾಗುವುದು” ಎಂದು ಪಾಠಕ್ ತಿರುಗೇಟು ನೀಡಿದ್ದಾರೆ.