ಪತ್ನಿಯ ಮೇಲೆ ಡೌಟು | ಇಡೀ ಕುಟುಂಬವನ್ನೇ ಹತ್ಯೆ ಮಾಡಲು ಯತ್ನಿಸಿದ ಶಿಕ್ಷಕ!
ವಿಜಯಪುರ: ಪತ್ನಿಯ ಮೇಲೆ ವಿಪರೀತ ಅನುಮಾನ ಹೊಂದಿದ್ದ ಶಿಕ್ಷಕನೋರ್ವ ಇದೀಗ ಘೋರ ಕೃತ್ಯ ಎಸಗಿದ್ದು, ತನ್ನ ಇಡೀ ಕುಟುಂಬದ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಲು ಹತ್ಯೆಗೆ ಯತ್ನಿಸಿದ್ದಾನೆ. ತನ್ನ ವೃದ್ಧ ತಂದೆ-ತಾಯಿಯ ಮೇಲೆ ಕೂಡ ಹಲ್ಲೆ ನಡೆಸಿದ್ದಾನೆ.
ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಆರೋಪಿ ಸಿದ್ರಾಮಪ್ಪ ದತ್ತಪ್ಪ ಮುಳಸಾವಳಗಿ(50) ಸರಕಾರಿ ಶಾಲೆಯ ಶಿಕ್ಷಕನಾಗಿದ್ದಾನೆ. ಅಲ್ಲದೇ, ದೇವರ ಹಿಪ್ಪರಗಿ ತಾಲೂಕಿನ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಕೂಡ ಆಗಿದ್ದಾನೆ. ಆದರೆ ಇದೀಗ ಈತ ಮಾಡಿರುವ ಘನಂದಾರಿ ಕೆಲಸದಿಂದಾಗಿ ಈತನ ಇನ್ನೊಂದು ಮುಖ ಬಯಲಿಗೆ ಬಂದಿದೆ.
ತನ್ನ ಪತ್ನಿ ರೇಣುಕಾ ಸಿದ್ಧರಾಮಪ್ಪ ಮುಳಸಾವಳಗಿ ಅವರ ನಡತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ ದಿನನಿತ್ಯ ಈತ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಜನವರಿ 29ರ ರಾತ್ರಿ ಪತ್ನಿಯನ್ನು ಕೊಲೆ ಮಾಡಲು ಈತ ಸಂಚು ರೂಪಿಸಿದ್ದಾನೆ.
ರಾತ್ರಿ ಸುಮಾರು 9:30ರ ವೇಳೆಗೆ ಕಬ್ಬಿಣದ ಹಾರೆಯನ್ನು ಹಿಡಿದುಕೊಂಡು ಪತ್ನಿಯನ್ನು ಹತ್ಯೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಈತನ 10 ವರ್ಷ ವಯಸ್ಸಿನ ಅವಳಿ ಜವಳಿ ಇಬ್ಬರು ಮಕ್ಕಳು ಹಾಗೂ 75 ವರ್ಷ ವಯಸ್ಸಿನ ತಂದೆ, 70 ವರ್ಷದ ತಾಯಿ ಇವರು ಈತನ ಕೃತ್ಯ ತಡೆಯಲು ಪ್ರಯತ್ನಿಸಿದ್ದಾರೆ.
ಪತ್ನಿಯನ್ನು ಕೊಲ್ಲಲು ಅಡ್ಡಿ ಪಡಿಸಿದರು ಎಂದು ಕೋಪಗೊಂಡ ಆರೋಪಿ ಮಕ್ಕಳು ಹಾಗೂ ವೃದ್ಧರ ಮೇಲೆ ಅದೇ ಹಾರೆಯಿಂದ ಹಲ್ಲೆ ನಡೆಸಿದ್ದಾನೆ. ಮನೆಯಿಂದ ಜೋರಾಗಿ ಕಿರುಚಾಟ ಕೇಳಿದ್ದರಿಂದ ಎಚ್ಚೆತ್ತುಕೊಂಡ ಸ್ಥಳೀಯರು ಓಡಿ ಬಂದು ರಕ್ಷಿಸಿದ್ದಾರೆ.
ಘಟನೆ ಸಂಬಂಧ ಆರೋಪಿಯ ಪತ್ನಿ ಪತ್ನಿ ರೇಣುಕಾ ಸಿದ್ರಾಮಪ್ಪ ಮುಳಸಾವಳಗಿ ಅವರ ಸಹೋದರ ಪರಶುರಾಮ ಮಲಕನಗೌಡ ಪಾಟೀಲ ಬಸವನ ಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೃತ್ಯದ ಬಳಿಕ ಆರೋಪಿಯು ತಾನು ಯಾಕೆ ಕೊಲೆ ಮಾಡಲು ಯತ್ನಿಸಿದ್ದೇನೆ ಎಂದು ವಿಡಿಯೋ ಮಾಡಿದ್ದಾನೆ. ಈ ವಿಡಿಯೋದಲ್ಲಿ ತನ್ನ ಕೃತ್ಯಕ್ಕೆ ಸ್ವಲ್ಪವೂ ಪಶ್ಚಾತಾಪವನ್ನು ಆತ ವ್ಯಕ್ತಪಡಿಸಿಲ್ಲ. ತನ್ನನ್ನು ಕೊಲೆ ಮಾಡಲು ಯತ್ನಿಸಲಾಗಿತ್ತು ಎಂಬಂತೆ ಮಾತನಾಡಿದ್ದು, ಆತ ವಿಡಿಯೋದಲ್ಲಿ ಏನು ಮಾತನಾಡಿದ್ದಾನೆ ಎನ್ನುವುದೇ ತಿಳಿಯದಂತೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾನೆ. ಇಂತಹವರೆಲ್ಲ ಹೇಗೆ ಶಿಕ್ಷಣ ಇಲಾಖೆಯಂತಹ ಪವಿತ್ರ ಸ್ಥಾನದಲ್ಲಿ ಇದ್ದಾರೋ ಗೊತ್ತಿಲ್ಲ ಎನ್ನುವ ಮಾತುಗಳು ಸದ್ಯ ಕೇಳಿ ಬಂದಿದೆ.


























