ಈಕೆಗೆ ಗಲ್ಲು ಸಿದ್ಧವಾಗಿದೆ | ಅಷ್ಟಕ್ಕೂ ಈಕೆ ಮಾಡಿದ ಅಪರಾಧ ಏನು? - Mahanayaka
6:38 AM Wednesday 28 - January 2026

ಈಕೆಗೆ ಗಲ್ಲು ಸಿದ್ಧವಾಗಿದೆ | ಅಷ್ಟಕ್ಕೂ ಈಕೆ ಮಾಡಿದ ಅಪರಾಧ ಏನು?

17/02/2021

ಮಥುರಾ: ಈಕೆಯ ಹೆಸರು ಶಬನಂ.  ಈಕೆಯನ್ನು ಗಲ್ಲಿಗೇರಿಸಲು ಮಥುರಾ ಜೈಲಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಸ್ವಾತಂತ್ರ್ಯದ ಬಳಿಕ ಗಲ್ಲು ಶಿಕ್ಷೆ ಅನುಭವಿಸುತ್ತಿರುವ ಮೊದಲ ಮಹಿಳೆ ಈಕೆಯಾಗಿದ್ದಾಳೆ. ಅಷ್ಟಕ್ಕೂ ಈಕೆ ಮಾಡಿದ ಅಪರಾಧವೇನು?

ಉತ್ತರ ಪ್ರದೇಶದ ಅಮ್ರೋಹಾದ ಹಸನ್ಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ಬವಾಂಖೇಡಿ ಗ್ರಾಮದ ನಿವಾಸಿಯಾಗಿರುವ ಶಬನಂ, ಮದುವೆಗೂ ಮೊದಲು ಸಲೀಂ ಎಂಬಾತನನ್ನು ಪ್ರೀತಿಸಿದ್ದಳು. ಮದುವೆಯ ಬಳಿಕವೂ ಆಕೆಗೆ ಸಲೀಂನನ್ನು ಮರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಸಲೀಂ ಜೊತೆಗಿನ ಪ್ರೀತಿಗೆ ಅಡ್ಡಿಯಾಗುತ್ತಿದ್ದ ತನ್ನ ಕುಟುಂಬದ 7 ಮಂದಿಯನ್ನು ಕೊಚ್ಚಿ ಕೊಲೆ ಮಾಡಿದ್ದಾಳೆ.

2008 ಎಪ್ರಿಲ್ 14 ಮತ್ತು 15ರ ಮಧ್ಯರಾತ್ರಿ ಚಹಾದಲ್ಲಿ ಮತ್ತು ಬರಿಸುವ ಔಷಧ ಬೆರೆಸಿ ಮನೆಯವರಿಗೆ ನೀಡಿದ್ದ ಶಬನಂ, ತನ್ನ ಪ್ರಿಯಕರ ಸಲೀಂನ ಸಹಾಯದೊಂದಿಗೆ ಮನೆಯ 7 ಸದಸ್ಯರ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾಳೆ.

ಈ ಕೃತ್ಯಕ್ಕೆ ಸಂಬಂಧಿಸಿದಂತೆ ಶಬನಂಗೆ ಎಲ್ಲ ಕೋರ್ಟ್ ಗಳೂ ಮರಣ ದಂಡನೆ ಶಿಕ್ಷೆ ನೀಡಿದೆ. ಸುಪ್ರೀಂಕೋರ್ಟ್‌ ಕೊನೆಗೆ ರಾಷ್ಟ್ರಪತಿ ಕ್ಷಮಾದಾನದ ವರೆಗೆ ಹೋದರೂ ಈಕೆಗೆ ಬಿಡುಗಡೆ ಸಿಗಲಿಲ್ಲ. ಶಬನಂ, ಸಲೀಂಗೆ ಸಣ್ಣ ಮಗುವಿದೆ. ಇಬ್ಬರಿಗೂ ಗಲ್ಲುಶಿಕ್ಷೆಯಾದರೆ ಮಗು ಅನಾಥವಾಗುವುದು ಎಂದು ಪ್ರಕರಣದ ಅಮಿಕಸ್‌ ಕ್ಯೂರಿ ದುಷ್ಯಂತ್‌ ಪರಾಶರ್‌ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ವಾದವನ್ನು ಕೋರ್ಟ್‌ ಮಾನ್ಯ ಮಾಡಿಲ್ಲ. ಹೀಗಾಗಿ ಗಲ್ಲು ಶಿಕ್ಷೆ ಕಾಯಂ ಆಗಿದೆ.

ಇತ್ತೀಚಿನ ಸುದ್ದಿ