ಕೇರಳ ರಾಜ್ಯಪಾಲರು ಆರ್ ಎಸ್ ಎಸ್ ಕಾರ್ಯಕರ್ತರ ಗುಂಪಿಗೆ ಸೇರಿದ್ದಾರೆ: ಪಿಣರಾಯಿ ವಿಜಯನ್ ಖಡಕ್ ಪ್ರತಿಕ್ರಿಯೆ

ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಅವರಿಗೆ ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯಕರ್ತರು ಕಪ್ಪು ಭಾವುಟ ಪ್ರದರ್ಶಿಸಿದ್ದು, ಇದರಿಂದ ಆಕ್ರೋಶಗೊಂಡ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರಸ್ತೆ ಬದಿಯಲ್ಲೇ ಕುಳಿತು, ಪ್ರತಿಭಟನಾಕಾರರನ್ನು ಬಂಧಿಸುವಂತೆ ಪಟ್ಟು ಹಿಡಿದ ಘಟನೆ ನಡೆದಿತ್ತು. ಈ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್, ರಾಜ್ಯಪಾಲರು ಕಾರಿನಿಂದ ಕೆಳಗೆ ಇಳಿದಿರುವುದು ಭದ್ರತಾ ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ. ಅವರು ಹಾಗೆ ಮಾಡಬಾರದಿತ್ತು. ರಾಜ್ಯಪಾಲರು ಪದೇ ಪದೇ ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ಧವಾದ ನಿಲುವು ತೆಗೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ರಾಜ್ಯಪಾಲರ ಭದ್ರತೆಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್ ಪಿಎಫ್) ಹಸ್ತಾಂತರಿಸಿರುವುದು ‘ವಿಚಿತ್ರ’ ಎಂದು ಬಣ್ಣಿಸಿದ ಮುಖ್ಯಮಂತ್ರಿ, ಖಾನ್ ಅವರು ಈಗ ಕೇಂದ್ರದಿಂದ ವಿಶೇಷ ಸೌಲಭ್ಯ ಪಡೆಯುತ್ತಿರುವ ಕೆಲ ಆರ್ ಎಸ್ ಎಸ್ ಕಾರ್ಯಕರ್ತರ ಗುಂಪಿಗೆ ಸೇರಿದ್ದಾರೆ ಎಂದು ಆರೋಪಿಸಿದ್ದಾರೆ.
ಶನಿವಾರ ಬೆಳಿಗ್ಗೆ ಕೊಟ್ಟಾರಕ್ಕರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ರಾಜ್ಯಪಾಲ ಆರಿಫ್ ಅವರಿಗೆ ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯಕರ್ತರು ಕಪ್ಪು ಭಾವುಟ ಪ್ರದರ್ಶಿಸಿದ್ದರು.