ಅಕ್ಕಿರಾಜ ಖ್ಯಾತಿಯ ಆನೆ ಯಕೃತ್ ಹಾನಿ, ಹೃದಯಸ್ತಂಭನದಿಂದ ಸಾವು

ಚಾಮರಾಜನಗರ: ಅಕ್ಕಿ ರಾಜ ಎಂಥಲೇ ಖ್ಯಾತಿ ಪಡೆದಿದ್ದ, ದಸರಾಗೆ ಪಳಗಿಸುತ್ತಿದ್ದ ಆನೆಯು ಹೃದಯಸ್ತಂಭನ ಹಾಗೂ ಯಕೃತ್ ಹಾನಿಯಿಂದ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ ನಡೆದಿದೆ.
ಕಳೆದ ಜೂ. 7 ರಂದು ಈ ಆನೆಯನ್ನು ಕುಂದಕೆರೆ ವಲಯದಲ್ಲಿ ಸೆರೆ ಹಿಡಿದು ರಾಂಪುರ ಆನೆ ಶಿಬಿರಕ್ಕೆ ರವಾನೆ ಮಾಡಲಾಗಿತ್ತು. ಆನೆ ನೋಡಲು ಸುಂದರವಾಗಿದ್ದರಿಂದ ಮತ್ತು ಗಾತ್ರದಲ್ಲಿ ಹಿರಿದಾಗಿದ್ದರಿಂದ ದಸರಾಗೆ ಪಳಗಿಸಲಾಗುತ್ತಿತ್ತು. ಆನೆ ಸೆರೆ ಹಿಡಿದು ಕ್ರಾಲ್ ನಲ್ಲಿ ಇಡಲಾಗಿತ್ತು. ಬಳಿಕ, ಕಳೆದ ತಿಂಗಳು 21 ರಂದು ಹೊರಕ್ಕೆ ಕರೆತಂದು ಉಳಿದ ಸಾಕಾನೆಗಳ ಜೊತೆ ತರಬೇತಿ ನೀಡಲಾಗುತ್ತಿತ್ತು ಎಂದು ಅರಣ್ಯ ಇಲಾಖೆ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
31 ರ ಮಧ್ಯಾಹ್ನ ಆನೆ ದಿಢೀರ್ ಕೆಳಕ್ಕೆ ಬಿದ್ದಿದ್ದು ಬಳಿಕ ಪಶು ವೈದ್ಯರು ತೆರಳಿ ಪ್ರಥಮ ಚಿಕಿತ್ಸೆ ನೀಡಿದರೂ ಸ್ಪಂದಿಸದೇ ಅಸುನೀಗಿದೆ. ಇಂದು ಡಾ.ವಾಸಿಂ ಮಿರ್ಜಾ ಮತ್ತು ಡಾ.ಮುಜೀಬ್ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಸಾಮಾನ್ಯ ಗಾತ್ರಕ್ಕಿಂತ 3 ಪಟ್ಟು ಹೃದಯದ ಗಾತ್ರ ದೊಡ್ಡದಾಗಿರುವುದು, ಯಕೃತ್ ಹಾನಿಯಾಗಿರುವುದು ತಿಳಿದುಬಂದಿದೆ.
ಹೆಚ್ಚಿನ ಪರೀಕ್ಷೆಗಾಗಿ ಆನೆಯ ಕೆಲ ಭಾಗಗಳನ್ನು ಮೈಸೂರಿಗೆ ರವಾನೆ ಮಾಡಲಾಗಿದೆ ಎಂದು ಬಂಡೀಪುರ ಅರಣ್ಯ ಇಲಾಖೆ ತಿಳಿಸಿದೆ.ಇನ್ನು, ಮರಣೋತ್ತರ ಪರೀಕ್ಷೆ ಬಳಿಕ ಆನೆಯನ್ನು ಹೂಳಲಾಗಿದೆ.