ಇಳಿ ವಯಸ್ಸಿನಲ್ಲಿ  ಬುದ್ದಿಮಾಂದ್ಯರಂತೆ ಸಂವಿಧಾನದ ವಿರುದ್ಧ ಮಾತನಾಡಬೇಡಿ | ದೊಡ್ಡರಂಗೇಗೌಡಗೆ  ದ್ರಾವಿಡ  ಭೀಮ್  ಆರ್ಮಿ ಎಚ್ಚರಿಕೆ - Mahanayaka
3:51 AM Tuesday 16 - September 2025

ಇಳಿ ವಯಸ್ಸಿನಲ್ಲಿ  ಬುದ್ದಿಮಾಂದ್ಯರಂತೆ ಸಂವಿಧಾನದ ವಿರುದ್ಧ ಮಾತನಾಡಬೇಡಿ | ದೊಡ್ಡರಂಗೇಗೌಡಗೆ  ದ್ರಾವಿಡ  ಭೀಮ್  ಆರ್ಮಿ ಎಚ್ಚರಿಕೆ

22/02/2021

ಹಾಸನ: ಇಡೀ ವಿಶ್ವದ ಸಂವಿಧಾನದ ತಜ್ಞರೆಲ್ಲ  ಭಾರತದ ಸಂವಿಧಾನ ಸರ್ವಕಾಲಕ್ಕೂ ಪ್ರಸ್ತುತ ಎಂದು ಹೆಮ್ಮೆಯಿಂದ ಹೇಳುತ್ತಿರುವಾಗ ಡಾ.ಬಿ.ಆರ್.ಅಂಬೇಡ್ಕರ್ ಬರೆದಿರುವ ಸಂವಿಧಾನದಡಿಯಲ್ಲಿಯೇ ಎಲ್ಲವನ್ನು ಅನುಭವಿಸಿ ಈಗ ಸಂವಿಧಾನ ಇಂದಿನ ದಿನಮಾನಗಳಿಗೆ ಅಪ್ರಸ್ತುತ ಇದನ್ನು  ತಿದ್ದುಪಡಿ ಮಾಡಬೇಕು ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ. ದೊಡ್ಡರಂಗೇಗೌಡರ ಮಾತು ಖಂಡನೀಯ ಎಂದು ದ್ರಾವಿಡ ಭೀಮ್ ಆರ್ಮಿಯ ರಾಜ್ಯಾಧ್ಯಕ್ಷ ಸಂಪತ್ ಸುಬ್ಬಯ್ಯ ಹೇಳಿದರು.


Provided by

ಹಾಸನದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಮಾತನಾಡಿದ ಅವರು,  ಹಾಸನದಲ್ಲಿ ಶನಿವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೊಡ್ಡರಂಗೇಗೌಡ ವೇದಿಕೆಯ ಭಾಷಣದಲ್ಲಿ ಸಾಹಿತ್ಯ ವೇದಿಕೆ ಕಾರ್ಯಕ್ರಮ ಅನ್ನುವುದನ್ನು  ಮರೆತು  ಒಂದು ಪಕ್ಷದ ರಾಜಕೀಯ ವಕ್ತಾರಂತೆ ಸಂವಿಧಾನ ತಿದ್ದುಪಡಿಗೆ ಮೋದಿಗೆ ಮನವಿ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಮ್ಮೇಳನದಲ್ಲಿ ಅತೀ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಈ ಮಕ್ಕಳಿಗೆ ಇನ್ನು ಸಂವಿಧಾನ ಏನೆಂಬುದರ  ಬಗ್ಗೆ ಅಷ್ಟಾಗಿ ಅರಿವಿಲ್ಲದಂತಹ ಈ ಮಕ್ಕಳಿಗೆ ಹಾಗೂ ಜನಸಾಮಾನ್ಯರಿಗೆ  ಇಂತಹ ದೊಡ್ಡ ಸಾಹಿತಿಗಳೇ ಈ ದೇಶ ಹೊಸ ಕಾಲಕ್ಕೆ ತಕ್ಕಂತೆ  ಸಂವಿಧಾನವನ್ನು ಬರೆಯುವ ಪ್ರಯತ್ನ ಮಾಡುವುದಾದರೆ ಇದಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ ಎಂದು ಹೇಳಿದರೆ ಆ ಮಕ್ಕಳಿಗೆ ಸರ್ವಶ್ರೇಷ್ಠವಾಗಿರುವ ಸಂವಿಧಾನದ  ಬಗ್ಗೆ ಸಂಶಯ ವ್ಯಕ್ತವಾಗುವುದಿಲ್ಲಯೇ ಇಂತಹ ಸಾಹಿತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಇಂತಹ ಸಾಹಿತ್ಯ ವೇದಿಕೆಗಳನ್ನು ಬಳಸಿಕೊಳ್ಳುವುದು  ಸರಿಯಾದ ನಡೆಯಲ್ಲ. ಇವರ ಮಾತು ಸಮಾಜಕ್ಕೆ ಮಾರಕವಾದದು. ಇದು ಸಂವಿಧಾನ ಹಾಗೂ ಅಂಬೇಡ್ಕರ್ ಅವರಿಗೆ  ಮಾಡಿರುವ ಅಪಮಾನ  ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು

ಸಂವಿಧಾನದಡಿಯಲ್ಲಿ ರಂಗೇಗೌಡ ಪ್ರೊ.ಆಗಿರುವುದು ಹಾಗೆಯೇ ಸಮಾಜದಲ್ಲಿ ಸಿಗುವ ಎಲ್ಲ ಗೌರವವನ್ನು ಪಡೆದುಕೊಂಡಿರುವುದು ಎನ್ನುವುದು ಮರೆತು ಇಳಿ ವಯಸ್ಸಿನಲ್ಲಿ  ಬುದ್ದಿಮಾಂದ್ಯರಂತೆ ಸಂವಿಧಾನದ ವಿರುದ್ಧ ಹೇಳಿಕೆ ನೀಡುವುದು ಇವರಿಗೆ ಶೋಭೆ  ತರುವುದಿಲ್ಲ. ಎಲ್ಲವನ್ನು ಅನುಭವಿಸಿ 2021ನೇ ಇಸವಿಯಲ್ಲಿ ಸಂವಿಧಾನದಲ್ಲಿರುವ ಕೆಲ ಅಂಶಗಳು, ಕಾನೂನುಗಳು ಅಪ್ರಸ್ತುತ ಇವುಗಳನ್ನು  ಮಾರ್ಪಡು  ಮಾಡ ಬೇಕು  ಎನ್ನುವ ಇವರು ಕೀಳು ಮನಸ್ಥಿತಿ ಏನೆಂಬುವುದು ಜನರಿಗೆ ಅರ್ಥವಾಗಿದೆ. ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಅರ್ಥವಾಗಿದೆ ಎಂಬುವುದು ನನ್ನ ಭಾವನೆ ಎಂದು ಸಂಪತ್ ಸುಬ್ಬಯ್ಯ ಹೇಳಿದರು.

ಸಂವಿಧಾನದ ಬಗ್ಗೆ  ಈ ರೀತಿ ಅಪಪ್ರಚಾರದ ಮಾತುಗಳನ್ನು ಆಡುವ  ಪ್ರೊ.ದೊಡ್ಡರಂಗೇಗೌಡ ಅವರು 86ನೇ ಅಖಿಲ ಭಾರತದ ಸಾಹಿತ್ಯ ಸಮ್ಮೇಳನದ  ಸಮ್ಮೇಳನಾಧ್ಯಕ್ಷರಾಗಲು ಯೋಗ್ಯರಲ್ಲ ಎಂಬುವುದನ್ನು ಅವರೇ ಸಾಬೀತು ಮಾಡಿದ್ದಾರೆ. ಇಂತವರಿಗೆ  ಸಮ್ಮೇಳನ ಅಧ್ಯಕ್ಷರಲ್ಲ ಸಮ್ಮೇಳನದಲ್ಲಿ ಭಾಗವಹಿಸಲು  ಅವಕಾಶ ನೀಡದಂತೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ ಅವರು,  ಸಂವಿಧಾನ ಅಂದರೆ ನೀ ಬರೆಯುವ ಸಿನಿಮಾ ಹಾಡು ಅನ್ಕೊಂಡಿದಿರಾ?  ಸಂವಿಧಾನದ ಅಡಿಯಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಸೌಲಭ್ಯಗಳನ್ನು ಪಡೆಯದ ಯಾವುದೇ ಒಂದು ಜಾತಿ ಇದ್ದರೆ ಹೇಳಿ ಎಂದು ಸಂಪತ್ ಸವಾಲೆಸೆದರು.

ಇವರೇನು ಸಂವಿಧಾನ ತಜ್ಞರೇ? ಸಂವಿಧಾನದ ಬಗ್ಗೆ ಇವರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ.   ತಿದ್ದುಪಡಿಗಳಾಗಬೇಕಾದರೆ ಸಲಹೆ ನೀಡಲಿ, ಸಂವಿಧಾನ ಕರ್ತರೇ ತಿದ್ದುಪಡಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈವರೆಗೆ ಕಾಲ ಮತ್ತು ಬದಲಾವಣೆಗಳಿಗೆ ಅನುಗುಣವಾಗಿ ನೂರಕ್ಕೂ ಹೆಚ್ಚು ತಿದ್ದುಪಡಿಗಳಾಗಿವೆ. ಈಗ ಇವರು ಹೊಸ ಸಂವಿಧಾನದ ಬಗ್ಗೆ ಮಾತನಾಡುವ ಮರ್ಮವಾದರೂ ಏನು? ಇಂತಹ ಪಕ್ಷಪಾತಿಗಳು  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಅರ್ಹರಲ್ಲ. ಇವರ ಹೇಳಿಕೆ ಆಕ್ಷೇಪಾರ್ಹ ಎಂದ  ಅವರು , ಯಾವುದನ್ನ ತಿದ್ದುಪಡಿ ಮಾಡುತ್ತೀರಿ? ಏನಂತಾ ತಿದ್ದುಪಡಿ ಮಾಡುತ್ತೀರಿ? ಎಂದು ಪ್ರಶ್ನಿಸಿದರು. ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿ ದಿಕ್ಕು ತಪ್ಪಿಸಬಾರದು. ನಿಮ್ಮ ಹೇಳಿಕೆಗೆ ನೀವು ಸ್ಪಷ್ಟಣೆ ನೀಡಬೇಕು. ಇಲ್ಲದಿದ್ದರೆ,ಲಕ್ಷ ಲಕ್ಷ ಜನ ನಿಮ್ಮ ಮನೆ ಮುಂದೆಯೇ ಧರಣಿ ನಡೆಸುತ್ತಾರೆ ಎಂದು ಅವರು ದೊಡ್ಡರಂಗೇಗೌಡಗೆ  ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ  ದ್ರಾವಿಡ ಆರ್ಮಿ ರಾಜ್ಯ ಕಾರ್ಯಾಧ್ಯಕ್ಷ ಪ್ರಸಾದ್ ಹೆಚ್.ಆರ್., ಸಚಿನ್ ಎಸ್. ಗೌಡ ಹಾಸನ, ದಲಿತ ಮುಖಂಡ ಅನಂತ ರಾಜು,  ದ್ರಾವಿಡ ಭೀಮ್ ಆರ್ಮಿ ಜಿಲ್ಲಾ ಮುಖಂಡ ಪ್ರೀತಂ ಸುರೇಶ್,  ದಲಿತ ಮುಖಂಡ ಮಧು ಅರಕಲಗೂಡು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ