ತಮಿಳುನಾಡಿನಲ್ಲಿ ಸಮಾನತೆಯ ಯುಗ ಆರಂಭ: ಮೂವರು ಮಹಿಳಾ ಅರ್ಚಕರನ್ನು ನೇಮಿಸಲು ನಿರ್ಧಾರ

ತಮಿಳುನಾಡು: ತಮಿಳುನಾಡಿನ ಕೆಲವು ದೇವಸ್ಥಾನಗಳಲ್ಲಿ ಪೂಜೆ ಮಾಡಲು ಸಹಾಯಕ ಅರ್ಚಕರನ್ನು ನೇಮಿಸಲು ಸರ್ಕಾರ ನಿರ್ಧರಿಸಿದ್ದು, ಮಹಿಳೆಯರಿಗೆ ಪೌರೋಹಿತ್ಯ ಮಾಡಲು ಎಂ.ಕೆ.ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ಹೊಸ ಅವಕಾಶ ಕಲ್ಪಿಸಲು ಮುಂದಾಗಿದೆ.
ಮಹಿಳೆಯರಾದ ಕೃಷ್ಣವೇಣಿ, ಎಸ್.ರಮ್ಯಾ ಮತ್ತು ಎನ್.ರಂಜಿತಾ ಅವರನ್ನು ಹಿಂದೂ ಧಾರ್ಮಿಕ ಮತ್ತು ದತ್ತಿನಿಧಿ ಇಲಾಖೆಯಡಿ ಕಾರ್ಯನಿರ್ವಹಿಸುವ ದೇವಾಲಯಗಳಲ್ಲಿ ನೇಮಕ ಮಾಡಲು ತೀರ್ಮಾನಿಸಲಾಗಿದೆ.
ಈ ಮೂವರು ಮಹಿಳೆಯರು ಈಗಾಗಲೇ ಶ್ರೀರಂಗಂನ ಶ್ರೀ ರಂಗನಾಥರ ದೇವಸ್ಥಾನದ ಅರ್ಚಕರ ತರಬೇತಿ ಪೂರ್ಣಗೊಳಿಸಿದ್ದಾರೆ. ಈ ಮಹಿಳೆಯರಿಗೆ ತಮಿಳುನಾಡು ಸಚಿವ ಸೇಕರ್ ಬಾಬು ಅವರು ಪ್ರಮಾಣ ಪತ್ರ ಕೂಡ ಹಸ್ತಾಂತರಿಸಿದ್ದಾರೆ.
ದ್ರಾವಿಡ ಮಾದರಿಯ ಆಡಳಿತದಲ್ಲಿ ಮಹಿಳಾ ಅರ್ಚಕರು ಕೂಡ ಪೂಜೆ ಮಾಡಲಿದ್ದಾರೆ. ಎಲ್ಲ ಜಾತಿಯ ಜನರನ್ನು ದೇವಾಲಯಗಳಿಗೆ ಅರ್ಚಕರಾಗಿ ನೇಮಿಸುವ ಮೂಲಕ ಪೆರಿಯಾರ್ ಅವರ ಹೃದಯದ ಮುಳ್ಳು ತೆಗೆದಿದ್ದೇವೆ. ಮಹಿಳೆಯರು ಕೂಡ ಗರ್ಭಗುಡಿಗೆ ಪ್ರವೇಶ ಮಾಡುವ ಮೂಲಕ ಸಮಾನತೆಯ ಯುಗವನ್ನು ತರುತ್ತಿದ್ದೇವೆ ಎಂದು ತಮಿಳುನಾಡು ಸಿಎಂ ಟ್ವೀಟ್ ಮಾಡಿದ್ದಾರೆ.