ರಾಜ್ಯಾದ್ಯಂತ ಚರ್ಚೆಯಾಗ್ತಿದೆ ಸೌಜನ್ಯ ಕುಟುಂಬಸ್ಥರನ್ನು ಹೊರದಬ್ಬಿದ ವಿಚಾರ: ಸೌಜನ್ಯ ತಮ್ಮನಿಗೆ ಬೆದರಿಕೆ ಹಾಕಿದವನು ಯಾರು?

ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದದ ಹೆಸರಿನಲ್ಲಿ ನಿನ್ನೆ ನಡೆದ ಪ್ರತಿಭಟನೆ ಹಾಗೂ ಸೌಜನ್ಯಳ ತಾಯಿ ಹಾಗೂ ಕುಟುಂಬಸ್ಥರನ್ನು ಕಾರ್ಯಕ್ರಮ ನಡೆಯುವ ಸ್ಥಳದಿಂದ ಹೊರಗೆ ಹಾಕಿರೋದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.
ಈ ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವಿಡಿಯೋದಲ್ಲಿ ಕಂಡು ಬರುತ್ತಿರುವಂತೆ ಪ್ರತಿಭಟನಾ ಸ್ಥಳದ ವೇದಿಕೆ ಸಮೀಪದಲ್ಲಿ ಸೌಜನ್ಯಳ ಫೋಟೋ ಹೊಂದಿದ್ದ ಪ್ಲೇಕಾರ್ಡ್ ಹಿಡಿದುಕೊಂಡು ಸೌಜನ್ಯಳ ತಾಯಿ ಹಾಗೂ ಆಕೆಯ ಸಹೋದರ ಮತ್ತು ಕುಟುಂಬಸ್ಥರು ನಿಂತಿದ್ದಾರೆ. ಆದ್ರೆ, ಇದೇ ವೇಳೆ, ಇವರನ್ನುದ್ದೇಶಿಸಿ, “ನಕಲಿ ಹೋರಾಟಗಾರರಿಗೆ ಧಿಕ್ಕಾರ” ಎಂದು ಮಂಜುನಾಥ ಸ್ವಾಮಿ ಭಕ್ತ ವೃಂದ ತಂಡದವರು ಧಿಕ್ಕಾರ ಕೂಗುತ್ತಿರುವುದನ್ನು ಕೇಳಬಹುದಾಗಿದೆ.
ತಮ್ಮ ಮನೆ ಮಗಳಿಗೆ ಆದ ಅನ್ಯಾಯವನ್ನು ಪ್ರಶ್ನಿಸುವುದು ನಕಲಿ ಹೋರಾಟವೇ? ‘ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯ’ ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದರೂ, ಅದು ಹೆಸರಿಗೆ ಮಾತ್ರವೇ ಸೀಮಿತವಾಯಿತು. ಅಲ್ಲಿ ಬೇರೆ ವಿಚಾರಗಳೇ ಮಹತ್ವ ಪಡೆದುಕೊಂಡಿದೆ ಅನ್ನೋ ಮಾತುಗಳು ಕೇಳಿ ಬಂದಿವೆ. ಜೊತೆಗೆ ಸ್ವಸಹಾಯ ಸಂಘಗಳ ಗುಂಪು ಹಾಗೂ ವಿದ್ಯಾರ್ಥಿಗಳನ್ನು ಬಳಸಿಕೊಂಡು ಕಾರ್ಯಕ್ರಮ ನಡೆಸಲಾಗಿದೆ ಅನ್ನೋ ಆರೋಪಗಳು ಕೂಡ ಕೇಳಿ ಬಂದಿವೆ.
ನಿನ್ನೆ ನಡೆದ ಪ್ರತಿಭಟನೆಗಿಂತಲೂ ಸೌಜನ್ಯ ಕುಟುಂಬಸ್ಥರನ್ನು ಹೊರ ದಬ್ಬಿದ ವಿಚಾರವೇ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಜೊತೆಗೆ ಸೌಜನ್ಯಳ ತಮ್ಮ ಎಂದು ಹೇಳಲಾದ ಯುವಕನಿಗೆ ವ್ಯಕ್ತಿಯೋರ್ವ ಬೆದರಿಕೆ ಹಾಕುತ್ತಿರುವ ಕ್ರೌರ್ಯ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಜೊತೆಗೆ ಈ ವ್ಯಕ್ತಿ ಯಾರು ಎನ್ನುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶ್ನೆಗಳು ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw