ಮೆಸ್ಸಿಯನ್ನು ನೋಡೋಕೆ ಆಗಲಿಲ್ಲ: ರೊಚ್ಚಿಗೆದ್ದು ಮೈದಾನಕ್ಕೆ ನುಗ್ಗಿದ ಅಭಿಮಾನಿಗಳು
ಕೋಲ್ಕತ್ತಾ: ಅರ್ಜೆಂಟೀನಾದ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿಯನ್ನು ನೋಡಲು ಅಭಿಮಾನಿಗಳು ಸಾವಿರಾರು ರೂಪಾಯಿ ಹಣ ಚೆಲ್ಲಿ ಟಿಕೆಟ್ ಪಡೆದುಕೊಂಡಿದ್ದರು. ಆದ್ರೆ ಮೈದಾನಕ್ಕೆ ಮೆಸ್ಸಿ ಬಂದರೂ, ಅಭಿಮಾನಿಗಳಿಗೆ ನೋಡಲು ಸಾಧ್ಯವಾಗಲಿಲ್ಲ. ಇದರಿಂದ ರೊಚ್ಚಿಗೆದ್ದು ಮೈದಾನಕ್ಕೆ ನುಗ್ಗಿದ ಅಭಿಮಾನಿಗಳು ಕೈಗೆ ಸಿಕ್ಕ ವಸ್ತುಗಳನ್ನು ಪುಡಿಗಟ್ಟಿ ದಾಂಧಲೆ ನಡೆಸಿದ ಘಟನೆ ನಡೆದಿದೆ.
ಲಿಯೋನೆಲ್ ಮೆಸ್ಸಿ ಇಂದು ಬೆಳಗ್ಗೆ 11.30 ರ ಸುಮಾರಿಗೆ ಕೋಲ್ಕತ್ತಾದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣಕ್ಕೆ ಸ್ಟ್ರೈಕರ್ ಲೂಯಿಸ್ ಸುವಾರೆಜ್ ಮತ್ತು ಅರ್ಜೆಂಟೀನಾ ತಂಡದ ಸಹ ಆಟಗಾರ ರೊಡ್ರಿಗೋ ಡಿ ಪಾಲ್ ಅವರೊಂದಿಗೆ ಆಗಮಿಸಿದರು, ಮೊದಲು ಮೈದಾನಕ್ಕೆ ಇಳಿದರು. ಅಲ್ಲಿ ಸ್ವಲ್ಪ ಸಮಯ ಓಡಾಡಿ ಜನಸಮೂಹದತ್ತ ಕೈ ಬೀಸಿದರು. ಅವರ ಸುತ್ತ ಉದ್ದಕ್ಕೂ ನಿಂತಿದ್ದ ವಿಐಪಿಗಳು, ಸಂಘಟಕರು ಮತ್ತು ಭದ್ರತಾ ಸಿಬ್ಬಂದಿಯಿಂದ ಸುತ್ತುವರೆದಿದ್ದರು, ಹೀಗಾಗಿ ಗ್ಯಾಲರಿಗಳಿಂದ ಪ್ರೇಕ್ಷಕರ ಮೆಸ್ಸಿಯನ್ನು ನೋಡಲು ಸಾಧ್ಯವಾಗಲೇ ಇಲ್ಲ.
ಮೆಸ್ಸಿಯನ್ನು ನೋಡಬೇಕೆಂದು ಸಾವಿರಾರು ರೂಪಾಯಿ ಕೊಟ್ಟು ಟಿಕೇಟ್ ಖರೀದಿಸಿ ಬೆಳಿಗ್ಗೆಯಿಂದ ಕಾಯುತ್ತಿದ್ದರೂ, ನೇರವಾಗಿ ಅಥವಾ ಕ್ರೀಡಾಂಗಣದ ದೊಡ್ಡ ಪರದೆಗಳಲ್ಲಿ ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಅಭಿಮಾನಿಗಳು ರೊಚ್ಚಿಗೆದ್ದರು.
ಕೊನೆಗೆ ನಿರಾಸೆಗೊಂಡು, ಆಕ್ರೋಶಗೊಂಡ ಜನ ಮೈದಾನಕ್ಕೆ ನುಗ್ಗಿ ಬಾಟಲಿಗಳನ್ನು ಎಸೆದು, ಗ್ಯಾಲರಿಗಳಲ್ಲಿದ್ದ ಬ್ಯಾನರ್ ಗಳು, ಹೋರ್ಡಿಂಗ್ ಗಳು ಮತ್ತು ಪ್ಲಾಸ್ಟಿಕ್ ಕುರ್ಚಿಗಳನ್ನು ಹಾನಿಗೊಳಿಸಿದರು.
ಕೆಲವು ಪ್ರೇಕ್ಷಕರು ಗ್ಯಾಲರಿಯ ಬ್ಯಾರಿಕೇಡ್ ಗಳನ್ನು ಹರಿದು ಮೈದಾನದೊಳಗೆ ನುಗ್ಗಿದರು. ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಮೆಸ್ಸಿಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೊರಗೆ ಕರೆದೊಯ್ದು ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದ್ದರಿಂದ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣ ತಪ್ಪಲಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























