ನಿಷೇಧಿತ ಹಾವಿನೊಂದಿಗೆ ರೇವ್ ಪಾರ್ಟಿ: ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್ ವಿರುದ್ಧ ಎಫ್ಐಆರ್ ಫೈಲ್

ನೋಯ್ಡಾದಲ್ಲಿ ನಿಷೇಧಿತ ಹಾವಿನ ಜೊತೆಗೆ ಮತ್ತು ವಿದೇಶಿ ಹುಡುಗಿಯರೊಂದಿಗೆ ರೇವ್ ಪಾರ್ಟಿಗಳನ್ನು ಆಯೋಜಿಸಿದ್ದಕ್ಕಾಗಿ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್ ವಿರುದ್ಧ ನೋಯ್ಡಾ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಪೊಲೀಸರು ಕುಟುಕು ಕಾರ್ಯಾಚರಣೆ ನಡೆಸಿ ಇವರ ಗ್ಯಾಂಗ್ ನ ಐವರು ಸದಸ್ಯರನ್ನು ಬಂಧಿಸಿದ್ದಾರೆ.
ಸೆಕ್ಟರ್ 49 ರ ಪೊಲೀಸ್ ಠಾಣೆಯಲ್ಲಿ ಹೆಸರಿಸಲಾದ ಆರು ಮತ್ತು ಇತರ ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ದಾಳಿಯ ಸಮಯದಲ್ಲಿ ಐದು ನಾಗರಹಾವುಗಳು ಸೇರಿದಂತೆ ಒಂಬತ್ತು ಹಾವುಗಳು ಮತ್ತು ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶುಕ್ರವಾರ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಬಂಧಿತರನ್ನು ಪೊಲೀಸರು ಪ್ರಶ್ನಿಸಿದಾಗ ಎಲ್ವಿಶ್ ಯಾದವ್ ಹೆಸರು ಕೇಳಿಬಂದಿದೆ. ಬಿಗ್ ಬಾಸ್ ವಿಜೇತರ ಪಾರ್ಟಿಗಳಿಗೆ ಹಾವುಗಳನ್ನು ಸರಬರಾಜು ಮಾಡುತ್ತಿದ್ದೆವು ಎಂದು ಆರೋಪಿಗಳು ಬಹಿರಂಗಪಡಿಸಿದ್ದಾರೆ.
ಡ್ರಗ್ಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ನೋಯ್ಡಾ ಪೊಲೀಸರು ನಡೆಸಿದ ದಾಳಿಯ ನಂತರ ರೇವ್ ಪಾರ್ಟಿಯನ್ನು ಭೇದಿಸಲಾಗಿದೆ.