ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ಅರಿವಳಿಕೆಯಿಂದಾಗಿ ಪ್ರಜ್ಞಾಹೀನರಾಗಿದ್ದ ಮಹಿಳೆ, ಶಿಶು ಸಾವು

ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಆಪರೇಷನ್ ಥಿಯೇಟರ್ ನಲ್ಲಿ ನಡೆದ ಭಾರೀ ಬೆಂಕಿಯಲ್ಲಿ 25 ದಿನದ ನವಜಾತ ಶಿಶು ಮತ್ತು ಮಹಿಳೆ ಸಾವನ್ನಪ್ಪಿದ್ದಾರೆ.
ಅಗ್ನಿ ಅವಘಡದ ವೇಳೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಮಹಿಳೆಯನ್ನು ಬಿಟ್ಟು ಓಡಿ ಹೋಗಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಮಹಿಳೆಯ ಸುಟ್ಟ ದೇಹವನ್ನು ಹೊರತೆಗೆದಿದ್ದಾರೆ. ಒಟಿ ಕಾಂಪ್ಲೆಕ್ಸ್, ಐಸಿಯು ಮತ್ತು ಸಿಸಿಎಂಗಳಲ್ಲಿ ಹೊಗೆ ತುಂಬಿದ್ದರಿಂದ ಜನರು ಉಸಿರಾಡಲು ಕಷ್ಟಪಟ್ಟರು.
ಅಗ್ನಿ ಅವಘಡದ ವೇಳೆ ಒಟಿನಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿ ರೋಗಿಯನ್ನು ಬಿಟ್ಟು ಓಡಿಹೋದರು. ಅರಿವಳಿಕೆಯಿಂದಾಗಿ ಇಬ್ಬರೂ ರೋಗಿಗಳು ಪ್ರಜ್ಞಾಹೀನರಾಗಿದ್ದರು. ಮಗುವನ್ನು ಒಟಿಯಿಂದ ಹೊರತೆಗೆದು ಡಯಾಲಿಸಿಸ್ ಘಟಕದ ಐಸಿಯುಗೆ ಸ್ಥಳಾಂತರಿಸುವಾಗ ಮಹಿಳೆ ಒಟಿಯಲ್ಲಿಯೇ ಸುಟ್ಟು ಕರಕಲಾಗಿದ್ದಾರೆ. ಆದರೂ ಮಗುವಿನ ಪ್ರಾಣ ಉಳಿಸಲಾಗಲಿಲ್ಲ.
ಏತನ್ಮಧ್ಯೆ, ಶಸ್ತ್ರಚಿಕಿತ್ಸೆಯ ನಂತರದ ವಾರ್ಡ್, ಐಸಿಯು ಮತ್ತು ಹತ್ತಿರದ ಇತರ ರೋಗಿಗಳನ್ನು ಇತರ ವಿಭಾಗಗಳಿಗೆ ಸ್ಥಳಾಂತರಿಸಲಾಯಿತು ಮತ್ತು ಸುರಕ್ಷಿತಗೊಳಿಸಲಾಯಿತು.
ಘಟನೆ ಸಂಬಂಧ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಾರ್ಥ ಸಾರಥಿ ಸೇನ್ ಶರ್ಮಾ ಅವರು ಘಟನೆಯ ಕುರಿತು ಸಂಸ್ಥೆಯ ನಿರ್ದೇಶಕರಿಂದ ಮಾಹಿತಿ ಪಡೆದಿದ್ದಾರೆ.