ಜನಾರ್ದನ ರೆಡ್ಡಿ - ಶ್ರೀರಾಮುಲು ಮಾಲೀಕತ್ವದ ಮಾಡೆಲ್ ಹೌಸ್‌ಗೆ ಬೆಂಕಿ - Mahanayaka

ಜನಾರ್ದನ ರೆಡ್ಡಿ — ಶ್ರೀರಾಮುಲು ಮಾಲೀಕತ್ವದ ಮಾಡೆಲ್ ಹೌಸ್‌ಗೆ ಬೆಂಕಿ

reddy and sriramulu model house
23/01/2026

ಬಳ್ಳಾರಿ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆ ಮತ್ತು ಕಾಂಗ್ರೆಸ್ ಕಾರ್ಯಕರ್ತನ ಕೊಲೆ ಪ್ರಕರಣದ ಕಾವು ಆರುವ ಮುನ್ನವೇ, ಬಳ್ಳಾರಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಸೇರಿದ ‘ಜಿ ಸ್ಕೈರ್’ ಲೇಔಟ್‌ನಲ್ಲಿರುವ ಮಾಡೆಲ್ ಹೌಸ್‌ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಘಟನೆಯ ವಿವರ: ಬಳ್ಳಾರಿಯ ಜಿ ಸ್ಕೈರ್ ಲೇಔಟ್‌ ನಲ್ಲಿ ಖರೀದಿದಾರರಿಗೆ ತೋರಿಸಲು ನಿರ್ಮಿಸಲಾಗಿದ್ದ ಈ ಸುಸಜ್ಜಿತ ಮಾಡೆಲ್ ಹೌಸ್‌ ಗೆ ಶುಕ್ರವಾರ ಸಂಜೆ ಆರೂವರೆ ಸುಮಾರಿಗೆ ಬೆಂಕಿ ಬಿದ್ದಿದೆ. ಪೆಟ್ರೋಲ್ ಅಥವಾ ಡೀಸೆಲ್ ಸುರಿದು ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಸುಮಾರು 109 ಎಕರೆ ಪ್ರದೇಶದ ಈ ಲೇಔಟ್ ರೆಡ್ಡಿ ಮತ್ತು ಶ್ರೀರಾಮುಲು ಅವರ ಜಂಟಿ ಮಾಲೀಕತ್ವದಲ್ಲಿದೆ.

ಕಾಂಗ್ರೆಸ್ ವಿರುದ್ಧ ರೆಡ್ಡಿ ಸಹೋದರರ ಕಿಡಿ: ಈ ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ, “ಬ್ಯಾನರ್ ಗಲಾಟೆ ನಡೆದ ಸಂದರ್ಭದಲ್ಲೇ ಕಾಂಗ್ರೆಸ್‌ನವರು ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದರು. ಈಗ ಅದರಂತೆ ನಮ್ಮ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾರೆ. ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರೇ ಈ ಕೃತ್ಯದ ಹಿಂದೆ ಇದ್ದಾರೆ” ಎಂದು ನೇರವಾಗಿ ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶಾಸಕ ಜನಾರ್ದನ ರೆಡ್ಡಿ ಅವರು ಈ ಕುರಿತು ಬಳ್ಳಾರಿ ಎಸ್ಪಿಯವರೊಂದಿಗೆ ಮಾತನಾಡಿದ್ದು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ರಾಜಕೀಯ ಸಂಚಲನ: ಬಳ್ಳಾರಿಯಲ್ಲಿ ಈಗಾಗಲೇ ಬ್ಯಾನರ್ ವಿಚಾರವಾಗಿ ಎರಡು ಪಕ್ಷಗಳ ನಡುವೆ ಸಂಘರ್ಷ ಉಂಟಾಗಿತ್ತು. ಈಗ ರೆಡ್ಡಿ ಮಾಲೀಕತ್ವದ ಆಸ್ತಿಗೆ ಬೆಂಕಿ ಬಿದ್ದಿರುವುದು ಜಿಲ್ಲೆಯಲ್ಲಿ ಮತ್ತೆ ರಾಜಕೀಯ ಹಗೆತನಕ್ಕೆ ತುಪ್ಪ ಸುರಿದಂತಾಗಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ