ಕಾಂತಾರ -2ನಲ್ಲಿ ಕನ್ನಡದ ಕಲಾವಿದರಿಗೆ ಪ್ರಥಮ ಆದ್ಯತೆ: ರಿಷಬ್ ಶೆಟ್ಟಿ - Mahanayaka

ಕಾಂತಾರ -2ನಲ್ಲಿ ಕನ್ನಡದ ಕಲಾವಿದರಿಗೆ ಪ್ರಥಮ ಆದ್ಯತೆ: ರಿಷಬ್ ಶೆಟ್ಟಿ

rishb shetty
27/11/2023


Provided by

ಕುಂದಾಪುರ: ಕಾಂತಾರದ ಅಧ್ಯಾಯ ಒಂದನ್ನು ಆರಂಭಿಸಿದ್ದು, ಕರಾವಳಿಯ ಈ ಭಾಗಕ್ಕೆ ಸಂಬಂಧಿಸಿದ ಕಥೆಯಾಗಿರುವುದರಿಂದ ಬಹುತೇಕ ಈ ಭಾಗದಲ್ಲಿ ಚಿತ್ರೀಕರಣ ಆಗುವ ಸಾಧ್ಯತೆಗಳಿವೆ. ಚಿತ್ರದ ಕಲಾವಿದರ ಆಯ್ಕೆ ನಡೆಯುತ್ತಿದೆ. ಕನ್ನಡಿಗರೇ ಕಾಂತಾರವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರಿಂದ ಕನ್ನಡದ ಕಲಾವಿದರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.

ಕುಂಭಾಸಿಯ ಆನೆಗುಡ್ಡೆಯ ಶ್ರೀವಿನಾಯಕ ದೇವಸ್ಥಾನದಲ್ಲಿ ಸೋಮವಾರ ನಡೆದ ಕಾಂತಾರ–2 ಚಲನಚಿತ್ರದ ಮುಹೂರ್ತ ಹಾಗೂ ಕ್ಲಾಪ್ ಬೋರ್ಡ್ ಬಳಿಕ ಅವರು ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ಸಿನಿಮಾ ಬಗ್ಗೆ ಈಗಲೇ ಏನು ಹೇಳುವುದಿಲ್ಲ. ಡಿಸೆಂಬರ್ನಲ್ಲಿ ಚಿತ್ರೀಕರಣ ಆರಂಭ ಮಾಡಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದರು.

ಹಿಂದಿನಂತೆ ಸ್ಥಳೀಯರ ಜೊತೆ, ನಾಡಿನ ಇತರ ಭಾಗದ ಹೊಸ ಪ್ರತಿಭೆಗಳನ್ನು ಪರಿಗಣಿಸುವ ಯೋಚನೆ ಇದೆ. ಬಹುತೇಕ ಕಾಂತಾರ ಚಿತ್ರದ ತಾಂತ್ರಿಕ ತಂಡವೇ ಮುಂದುವರೆಯಲಿದೆ. ತುಂಬಾ ದೊಡ್ಡ ಜವಾಬ್ದಾರಿ ಇದೆ ಎಂದು ಅವರು ತಿಳಿಸಿದರು.

ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಕ್ಲಾಪ್ ಬೋರ್ಡ್ ಮಾಡಿದರು. ರಿಷಬ್ ಅವರ ಪುತ್ರಿ ರಾಧ್ಯಾ ರಿಷಬ್ ಶೆಟ್ಟಿ, ಕ್ಯಾಮರಾ ಸ್ವೀಚ್ಗೆ ಚಾಲನೆ ನೀಡಿದರು.

ನಿರ್ಮಾಪಕ ಹೊಂಬಾಳೆ ಫಿಲ್ಮಸ್ನ ವಿಜಯ್ ಕಿರಗಂದೂರು, ಚಲುವೇ ಗೌಡ, ಸಹ ಲೇಖಕರಾದ ಅನಿರುದ್ಧ್ ಮಹೇಶ್, ಶನಿಲ್ ಗುರು, ಛಾಯಾ ಗ್ರಹಣ ನಿರ್ದೇಶಕ ಅರವಿಂದ್ ಎಸ್.ಕಶ್ಯಪ್, ಸಂಗೀತ ಹಾಗೂ ಹಿನ್ನೆಲೆ ಸಂಗೀತ ನಿರ್ದೇಶಕರಾದ ಬಿ.ಅಜನೀಶ್ ಲೋಕನಾಥ್ ಹಾಗೂ ಬೊಬಿ, ಉದ್ಯಮಿಗಳಾದ ಬೈಲೂರು ಉದಯ ಕುಮಾರ ಶೆಟ್ಟಿ, ವಿನಯ ಕುಮಾರ ಶೆಟ್ಟಿ, ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಕೆ.ಶ್ರೀರಮಣ ಉಪಾಧ್ಯಾಯ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ