ವಿಮಾನದಲ್ಲಿ ಅಮೆರಿಕದ ಮಹಿಳೆಯ ಜೀವ ಉಳಿಸಿದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ - Mahanayaka

ವಿಮಾನದಲ್ಲಿ ಅಮೆರಿಕದ ಮಹಿಳೆಯ ಜೀವ ಉಳಿಸಿದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್

dr anjali nimbalkar
14/12/2025

Indigo Flight Medical Emergency — ನವದೆಹಲಿ:  ಗೋವಾ–ನವದೆಹಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿಯಾದ ಡಾ.ಅಂಜಲಿ ನಿಂಬಾಳ್ಕರ್(Dr. Anjali Nimbalkar) ಅವರು, ತುರ್ತು ಆರೋಗ್ಯ ಪರಿಸ್ಥಿತಿ ಎದುರಿಸುತ್ತಿದ್ದ  ಅಮೇರಿಕಾದ ಮಹಿಳೆಯೊಬ್ಬರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿ, ಅವರ ಜೀವ ಉಳಿಸಿರುವ ಘಟನೆ ನಡೆದಿದೆ.

ಕ್ಯಾಲಿಫೋರ್ನಿಯಾದ ಜೆನ್ನಿ (34) (Jenny ) ಎಂಬವರು, ವಿಮಾನ ಟೇಕ್–ಆಫ್ ಆದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಖಾನಾಪುರದ ಮಾಜಿ ಶಾಸಕಿಯಾದ ಡಾ.ಅಂಜಲಿ ನಿಂಬಾಳ್ಕರ್ ಅವರು ತಕ್ಷಣವೇ, ಜೆನ್ನಿಗೆ ಸಿಪಿಆರ್ (CPR) ನೀಡಲು ಪ್ರಯತ್ನಿಸಿದರು.  ಕೆಲ ನಿಮಿಷಗಳ ನಂತರ ಆಕೆಗೆ ಪ್ರಜ್ಞೆ ಬಂತು ಮತ್ತು ಮಾತನಾಡಲು ಸಾಧ್ಯವಾಯಿತು. ಆಕೆಯ ವೈದ್ಯಕೀಯ ಇತಿಹಾಸ ಕೇಳಿದಾಗ, ಹಿಂದಿನ ದಿನದಿಂದ ಹೊಟ್ಟೆ ಕೆಟ್ಟು  ಆಕೆ ಏನೂ ತಿಂದಿರಲಿಲ್ಲ ಮತ್ತು ವಿಮಾನ ಹತ್ತುವ ಮೊದಲು ಮಾತ್ರ ಮಾತ್ರೆಗಳನ್ನು ತೆಗೆದುಕೊಂಡಿದ್ದಳು ಎಂದು ಹೇಳಿದಳು. ತಕ್ಷಣವೇ ಎಲೆಕ್ಟ್ರೋಲೈಟ್ ನೀರನ್ನು ಕೊಟ್ಟೆ ಮತ್ತು ಸ್ವಲ್ಪ ಸಮಯದ ನಂತರ ಅವಳು ಸರಿಯಾದಳು. ಸ್ವಲ್ಪ ಸಮಯದ ನಂತರ ಆಕೆಯ ಆರೋಗ್ಯ ಮತ್ತೆ ಕೈಕೊಟ್ಟಿದೆ ಎಂದು ಆಕೆಯ ಸಹೋದರಿ ಡಾ.ಅಂಜಲಿ ಅವರಿಗೆ ಹೇಳಿದ್ದಾರೆ.

ಮತ್ತೆ ಅವಳನ್ನು ಪರೀಕ್ಷಿಸಲು ಹೋದ ವೇಳೆ ಆಕೆಯ ಮುಖ ಬಿಳಿಚಿಕೊಂಡಿತ್ತು, ಆಕೆ ನೀಲಿ ಬಣ್ಣಕ್ಕೆ ತಿರುಗಿದ್ದಳು. ಇದನ್ನು ಗಮನಿಸಿ ಆಕೆ ಬದುಕಲು ಸಾಧ್ಯವಿಲ್ಲ ಎಂದು ವೈದ್ಯರು ಅಂದುಕೊಂಡರಂತೆ,  ಹೀಗಾಗಿ ಜೋರಾಗಿ ಕೂಗಿ ಅಲ್ಲಿನ ಕುರ್ಚಿಯನ್ನು ಖಾಲಿ ಮಾಡಲು ವೈದ್ಯರು ಹೇಳಿದರು ಮತ್ತು ಪ್ರಯಾಣಿಕರು ಸಹಕರಿಸಿದರು.  ಆದರೆ ಸರಿಯಾದ ವೈದ್ಯಕೀಯ ಉಪಕರಣಗಳು ಇಲ್ಲದ ಕಾರಣ ವೈದ್ಯರಿಗೆ ಚಿಕಿತ್ಸೆ ನೀಡಲು ಹಿನ್ನಡೆಯಾಗಿತ್ತು. ಆದರೂ  ಸಾಧ್ಯವಿರುವ ಚಿಕಿತ್ಸೆಯನ್ನು ಅವರು ನೀಡಿದರು.  ಸುಮಾರು 15–20 ನಿಮಿಷಗಳ ನಂತರ ಅವರ ಪ್ರಯತ್ನಗಳಿಗೆ  ಫಲ ನೀಡಲು ಪ್ರಾರಂಭಿಸಿದವು, ಅವಳ ಮೈ ಬೆಚ್ಚಗಾಯಿತು, ನಾಡಿ ಬಡಿತ ಮತ್ತು ಬಿಪಿ 90/60ಕ್ಕೆ ಬಂದಿತು. ಮತ್ತೆ ಎಲೆಕ್ಟ್ರೋಲೈಟ್ ನೀರನ್ನು ಕೊಟ್ಟು ಹೈಡ್ರೇಟ್ ಮಾಡಲು ಶುರುಮಾಡಿದರು. ಅಂತಿಮವಾಗಿ ವಿಮಾನ ಕೂಡ ಲ್ಯಾಂಡಿಂಗ್ ಆಗುವ ಸಮಯವಾಗಿತ್ತು. ಜೆನ್ನಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಳ್ಳಲಾಯಿತು. ಅಂತಿಮವಾಗಿ ಪ್ರಯಾಣಿಕರೊಬ್ಬರ ಜೀವ ಉಳಿಸಿದ್ದಕ್ಕೆ ಇಂಡಿಗೋ ಸಿಬ್ಬಂದಿ   ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಇನ್ನೂ ಈ ವಿಚಾರ ತಿಳಿದು ಸಿಎಂ ಸಿದ್ದರಾಮಯ್ಯನವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೋವಾ–ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿಯಾದ ಡಾ.ಅಂಜಲಿ ನಿಂಬಾಳ್ಕರ್ ಅವರು ಅಮೇರಿಕಾದ ಮಹಿಳೆಯೊಬ್ಬರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯತೆಯನ್ನು ಅರಿತು, ತಕ್ಷಣವೇ ಸಿಪಿಆರ್ ನೀಡಿ ಮಹಿಳೆಯ ಪ್ರಾಣ ಉಳಿಸಿದ ವಿಚಾರ ಕೇಳಿ ಹೆಮ್ಮೆಯೆನಿಸಿತು. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ ರೋಗಿಯೊಬ್ಬರ ನೆರವಿಗೆ ಧಾವಿಸಿದ ಅಂಜಲಿಯವರ ಸೇವಾ ಮನೋಭಾವ ಮತ್ತು ಸಮಯಪ್ರಜ್ಞೆ ಅತ್ಯಂತ ಶ್ಲಾಘನೀಯ. ಅಧಿಕಾರವಿರಲಿ, ಇಲ್ಲದಿರಲಿ ಜನಸೇವೆ ಎಂದು ಬಂದಾಗ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕೈಲಾದ ಸಹಾಯಕ್ಕೆ ನಿಲ್ಲುವ ಅಂಜಲಿಯಂತವರು ಸಮಾಜಕ್ಕೆ ಮಾದರಿ. ನೂರುಕಾಲ ಅಂಜಲಿಯವರಿಗೆ ಆಯಸ್ಸು ಆರೋಗ್ಯ ನೀಡಿ, ಕಷ್ಟದಲ್ಲಿರುವ ಜೀವಗಳಿಗೆ ಅವರಿಂದ ಇನ್ನಷ್ಟು ನೆರವು ಸಿಗುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ