ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದ ನಾಲ್ವರು ಭಕ್ತರು ಬಸ್ ಹಾಯ್ದು, ಬೈಕ್ ಡಿಕ್ಕಿಯಾಗಿ ಸಾವು

ಕೊಪ್ಪಳ: ಸೀಗೆ ಹುಣ್ಣಿಮೆ ಅಂಗವಾಗಿ ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ವಿವಿಧೆಡೆಯಿಂದ ಪಾದಯಾತ್ರೆ ಹೊರಟಿದ್ದ ಭಕ್ತರ ಮೇಲೆ ಒಂದೆಡೆ ಖಾಸಗಿ ಬಸ್ ಹರಿದು ಮತ್ತು ಇನ್ನೊಂದೆಡೆ ಬೈಕ್ ಡಿಕ್ಕಿ ಹೊಡೆದು ಒಟ್ಟು ನಾಲ್ಕು ಜನ ಮೃತಪಟ್ಟಿರುವ ಘಟನೆ ನಡೆದಿದೆ.
ಕೊಪ್ಪಳ ತಾಲ್ಲೂಕಿನ ಕೂಕನಪಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ರಾತ್ರಿ ಪಾದಯಾತ್ರಿಗಳ ಮೇಲೆ ಬಸ್ ಹರಿದಿದ್ದರಿಂದ ಅನ್ನಪೂರ್ಣ (40), ಪ್ರಕಾಶ್ (25), ಶರಣಪ್ಪ (19) ಎಂಬುವರು ಮೃತಪಟ್ಟಿದ್ದಾರೆ. ನಾಲ್ಕು ಜನರಿಗೆ ಗಾಯಗಳಾಗಿವೆ. ಈ ಘಟನೆಯಲ್ಲಿ ಮೃತಪಟ್ಟವರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ತಳ್ಳಿಹಾಳ ಗ್ರಾಮದವರು.
ಹುಣ್ಣಿಮೆಗೆ ಎರಡು ದಿನಗಳ ಮೊದಲೇ ಪಾದಯಾತ್ರೆ ಆರಂಭಿಸಿದ್ದರು. ಹುಲಿಗಿ ತಲುಪಲು ಕೆಲವೇ ಗಂಟೆಗಳಿರುವಾಗಲೇ ಬಸ್ ಹಾಯ್ದ ರಭಸಕ್ಕೆ ಮೂರು ಜನರ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ. ಗ್ರಾಮೀಣ ಸಿಪಿಐ ಸುರೇಶ ಡಿ. ಭೇಟಿ ನೀಡಿದರು.
ಕುಕನೂರು ತಾಲ್ಲೂಕಿನ ಭಾನಾಪುರದ ಬಳಿ ನಡೆದ ಇನ್ನೊಂದು ಘಟನೆಯಲ್ಲಿ ಪಾದಯಾತ್ರೆ ಹೊರಟಿದ್ದ ಕುಕನೂರಿನ ವೀರೇಶ ಹಳ್ಳಿಕೇರಿ (28) ಎಂಬ ಯುವಕ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಇವರ ತಂಡದಲ್ಲಿ ಒಟ್ಟು ಒಂಬತ್ತು ಜನ ಪಾದಯಾತ್ರೆಗೆ ಹೊರಟಿದ್ದರು.
ಪ್ರತಿ ಹುಣ್ಣಿಮೆ, ಮಂಗಳವಾರ ಹಾಗೂ ಶುಕ್ರವಾರದ ದಿನಗಳಂದ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಸಾಕಷ್ಟು ಜನ ಪಾದಯಾತ್ರೆ ತೆರಳುತ್ತಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD