ಮಗಳನ್ನು ಪ್ರೀತಿಸಿದ್ದೇ ತಪ್ಪಂತೆ: ಮನೆಗೆ ಕರೆಸಿ ಯುವಕನನ್ನು ಕೊಂದ ಆ ಕುಟುಂಬದ ನಾಲ್ವರಿಗೆ ಸಿಕ್ಕ ಶಿಕ್ಷೆ ಏನ್ ಗೊತ್ತಾ..?

ಮೂರು ವರ್ಷಗಳ ಹಿಂದೆ 20 ವರ್ಷದ ಯುವಕನನ್ನು ಕೊಲೆ ಮಾಡಿದ ಒಂದೇ ಕುಟುಂಬದ ನಾಲ್ವರಿಗೆ ಉತ್ತರ ಪ್ರದೇಶದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೋಪಾಲ್ ಉಪಾಧ್ಯಾಯ ಅವರು ಆರೋಪಿಗಳಾದ ಈಶ್ವರ್ ಚಂದ್, ಅವರ ಮಗ ವಿಮಲ್ ಮತ್ತು ಸಹೋದರರಾದ ದೇಶ್ ರಾಜ್ ಮತ್ತು ಲಲಿತ್ ಅವರಿಗೆ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿ ತಲಾ 10,000 ರೂ.ಗಳ ದಂಡ ವಿಧಿಸಿದ್ದಾರೆ.
ಮೃತ ರಾಜನ್, ಈಶ್ವರಚಂದ್ ಅವರ ಮಗಳೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಆದರೆ ಆಕೆಯ ಕುಟುಂಬವು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು ಎಂದು ಹೆಚ್ಚುವರಿ ಜಿಲ್ಲಾ ಸರ್ಕಾರಿ ಕೌನ್ಸಿಲ್ ಅರುಣ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.
2020ರ ಜೂನ್ 19ರಂದು ಜಿಲ್ಲೆಯ ಚಾಪರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಸೋನಾ ಗ್ರಾಮದಲ್ಲಿರುವ ಮನೆಯಲ್ಲಿ ರಾಜನ್ ಅವರನ್ನು ಕರೆಸಿ ಆರೋಪಿಗಳು ಥಳಿಸಿ ಹತ್ಯೆ ಮಾಡಿದ್ದರು. ನಂತರ ಆರೋಪಿಯ ಮನೆಯ ಟೆರೇಸ್ ನಿಂದ ಅವರ ಶವವನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಸಂತ್ರಸ್ತನ ತಾಯಿ ರಾಜ್ಬಿರಿ ಆರೋಪಿಗಳ ವಿರುದ್ಧ ದೂರು ನೀಡಿದ್ದರಿಂದ ಎಫ್ಐಆರ್ ದಾಖಲಿಸಲಾಗಿತ್ತು.