ಆಸ್ಪತ್ರೆಯಲ್ಲಿ ಘೋರ ನಿರ್ಲಕ್ಷ್ಯ: ರಕ್ತ ವರ್ಗಾವಣೆಯಿಂದ 4 ಮಕ್ಕಳಿಗೆ HIV ಸೋಂಕು!
ಮಧ್ಯಪ್ರದೇಶದ ಸತ್ನಾ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಥಲಸ್ಸೇಮಿಯಾದಿಂದ ಬಳಲುತ್ತಿದ್ದ ನಾಲ್ವರು ಮುಗ್ಧ ಮಕ್ಕಳು ಹೆಚ್‌ಐವಿ ಸೋಂಕಿಗೆ ತುತ್ತಾಗಿರುವ ಭೀಕರ ಘಟನೆ ರಾಜ್ಯದ ಆರೋಗ್ಯ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಸೋಮವಾರ (ನಿನ್ನೆ) ಬೆಳಕಿಗೆ ಬಂದ ಈ ಪ್ರಕರಣವು ನಾಲ್ಕು ತಿಂಗಳ ಹಿಂದಿನದಾಗಿದ್ದು, 8 ರಿಂದ 12 ವರ್ಷದ ಮಕ್ಕಳಿಗೆ ಚಿಕಿತ್ಸೆಯ ಭಾಗವಾಗಿ ಜಿಲ್ಲಾಸ್ಪತ್ರೆಯ ರಕ್ತನಿಧಿಯಿಂದ ರಕ್ತವನ್ನು ವರ್ಗಾಯಿಸಲಾಗಿತ್ತು. ಆದರೆ, ಈ ರಕ್ತವು ಹೆಚ್‌ಐವಿ ಸೋಂಕಿನಿಂದ ಕೂಡಿದ್ದು, ಇದೀಗ ಮಕ್ಕಳು ನಡೆಸಿದ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ಈಗಾಗಲೇ ರಕ್ತದ ಕೊರತೆಯಿಂದ ಬಳಲುತ್ತಿದ್ದ ಮಕ್ಕಳು ತಮ್ಮದಲ್ಲದ ತಪ್ಪಿಗೆ ಮತ್ತೊಂದು ಮಾರಕ ಕಾಯಿಲೆಗೆ ತುತ್ತಾಗಿದ್ದಾರೆ.
ತಲಸ್ಸೇಮಿಯಾದಂತಹ ಪ್ರಮುಖ ಕಾಯಿಲೆಗಳಿಗೆ ನಿರಂತರ ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸ್ವಯಂಪ್ರೇರಿತ ರಕ್ತದಾನದಿಂದ ಸಂಗ್ರಹಿಸಲಾದ ರಕ್ತವನ್ನು ಕಡ್ಡಾಯ ವೈದ್ಯಕೀಯ ತಪಾಸಣೆ ಇಲ್ಲದೆ ವಿತರಿಸಿರುವ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
ಸತ್ನಾ ಜಿಲ್ಲಾಸ್ಪತ್ರೆಯ ರಕ್ತನಿಧಿಯ ಉಸ್ತುವಾರಿ ಡಾ.ದೇವೇಂದ್ರ ಪಟೇಲ್ ಅವರು ಪ್ರತಿಕ್ರಿಯಿಸಿ, “ರಕ್ತದಾನದ ನಂತರ ನಾಲ್ಕು ಮಕ್ಕಳು ಎಚ್‌ಐವಿ ಸೋಂಕಿಗೆ ಒಳಗಾಗಿರುವುದನ್ನು ನಾವು ದೃಢಪಡಿಸಿದ್ದೇವೆ. ಈ ಘಟನೆಗೆ ಕಾರಣರಾದ ರಕ್ತದಾನಿಗಳ ಮತ್ತು ಆಸ್ಪತ್ರೆ ಸಿಬ್ಬಂದಿಯ ಕುರಿತು ತೀವ್ರ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ. ಈ ಘೋರ ನಿರ್ಲಕ್ಷ್ಯದ ಬಗ್ಗೆ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























