ಕಾರ್ಟೂನ್ ನೋಡುತ್ತಿದ್ದ ವೇಳೆ ಬಾಲಕಿ ಹೃದಯಾಘಾತದಿಂದ ಸಾವು!

ಲಕ್ನೋ: 5 ವರ್ಷದ ಮಗು ಬಾಲಕಿ ಮೊಬೈಲ್ ನಲ್ಲಿ ಕಾರ್ಟೂನ್ ನೋಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್ಪುರ ಕೊತ್ವಾಲಿಯದ ಹತೈಖೇಡಾದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಕಾಮಿನಿ ಎಂದು ಗುರುತಿಸಲಾಗಿದೆ. ಮಗು ತನ್ನ ಅಮ್ಮನ ಜೊತೆ ಮೊಬೈಲ್ ನಲ್ಲಿ ಕಾರ್ಟೂನ್ ವೀಕ್ಷಿಸುತ್ತಿತ್ತು.ಇದೇ ವೇಳೆ ಮಗು ಅಸ್ವಸ್ಥಗೊಂಡಿದ್ದು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅದಾಗಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.
ಹಸನಪುರ ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರಿ ಡಾ.ಧ್ರುವೇಂದ್ರ ಕುಮಾರ್ ಮಾತನಾಡಿ, ‘ಹೃದಯಾಘಾತದಿಂದ ಬಾಲಕಿ ಸಾವನ್ನಪ್ಪಿರಬಹುದು’ ಎಂದು ತಿಳಿಸಿದ್ದಾರೆ.
ಅಮ್ರೋಹಾ ಮುಖ್ಯ ವೈದ್ಯಾಧಿಕಾರಿ ಡಾ.ಸತ್ಯಪಾಲ್ ಸಿಂಗ್ ಮಾತನಾಡಿ, ಮೃತದೇಹವನ್ನುಮರಣೋತ್ತರ ಪರೀಕ್ಷೆಗಾಗಿ ಹಸ್ತಾಂತರಿಸುವಂತೆ ಕುಟುಂಬಕ್ಕೆ ಮನವಿ ಮಾಡಿದ್ದೇವೆ, ಆದರೆ ಅವರು ಒಪ್ಪಲಿಲ್ಲ ಎಂದು ತಿಳಿಸಿದರು.
ಮಗು ಹೃದಯಾಘಾತದಿಂದ ಸಾವನ್ನಪ್ಪಿದೆಯೇ ಅಥವಾ ಬೇರೆ ಯಾವುದಾದರೂ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆಯೇ ಎನ್ನುವುದನ್ನು ಪರೀಕ್ಷೆ ನಡೆಸಿದರೆ ತಿಳಿಯಬಹುದಷ್ಟೆ ಎಂದು ವೈದ್ಯರು ಹೇಳಿದ್ದಾರೆ.