ಜನಾಕ್ರೋಶಕ್ಕೆ ಬೆದರಿದ ಸರ್ಕಾರ: ಆನೆ ಸೆರೆ ಕಾರ್ಯಾಚರಣೆಗೆ ಮತ್ತೆ ಚಾಲನೆ

ಚಿಕ್ಕಮಗಳೂರು: ಆನೆ ಕಾರ್ಯಾಚರಣೆ(Elephant Capture) ವಿಚಾರದಲ್ಲಿ ಮಲೆನಾಡಿಗರ ಆಕ್ರೋಶಕ್ಕೆ ಮತ್ತೊಮ್ಮೆ ಬೆದರಿದ ಸರ್ಕಾರ ನಾಲ್ಕೇ ದಿನಕ್ಕೆ ಮತ್ತೆ ಕುಮ್ಕಿ ಆನೆಗಳನ್ನ ಕರೆಸಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಮುಂದಾಗಿದೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಕಾಡಾನೆ 4 ದಿನದಲ್ಲಿ ಇಬ್ಬರನ್ನ ಬಲಿ ಪಡೆದಿತ್ತು. ಮಲೆನಾಡಿಗರ ತಾಳ್ಮೆಯ ಕಟ್ಟೆ ಒಡೆದಿತ್ತು. ಬಾಳೆಹೊನ್ನೂರು-ಖಾಂಡ್ಯ ಬಂದ್ ಮಾಡಿ ಜನ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸಂಗಮೇಶ್ವರಪೇಟೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಾರಿಗೂ ಕೂಡ ಮುತ್ತಿಗೆ ಹಾಕಿದ್ದರು. ಗಂಟೆಗಟ್ಟಲೇ ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಜನರ ಆಕ್ರೋಶಕ್ಕೆ ಬೆದರಿದ ಸರ್ಕಾರ ಪ್ರತಿಭಟನೆ ನಡೆಯುತ್ತಿರುವಾಗಲೇ ಸ್ಥಳಕ್ಕೆ ಶಿವಮೊಗ್ಗದ ಸಕ್ರೆಬೈಲಿನಿಂದ 4 ಕುಮ್ಕಿ ಆನೆಗಳನ್ನ ಕರೆಸಿ 2 ಆನೆ ಸೆರೆ ಹಿಡಿಯುತ್ತೇವೆ ಎಂದಿದ್ರು. ಆದರೆ, ಕುಮ್ಕಿ ಆನೆಗಳು ಒಂದು ಪುಂಡಾನೆಯನ್ನ ಸೆರೆ ಹಿಡಿಯುತ್ತಿದ್ದಂತೆ ಕುಮ್ಕಿ ಆನೆಗಳು ಲಾರಿ ಹತ್ತಿದ್ವು.
ಜನ ಹೇಳಿದ್ದು ಮೂರು ಆನೆ. ಸರ್ಕಾರದ ಹೇಳಿದ್ದು ಎರಡು ಆನೆ. ಆದರೆ, ಒಂದು ಆನೆ ಸೆರೆ ಹಿಡಿದು ಕುಮ್ಕಿ ಆನೆಗಳು ವಾಪಸ್ ಹೋಗಿದ್ದಕ್ಕೆ ಜನ ಮತ್ತೊಮ್ಮೆ ಹೋರಾಟದ ಬಗ್ಗೆ ಚಿಂತಿಸ ತೊಡಗಿದ್ದರು. ಇದರ ಬೆನ್ನಲ್ಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ಕಾಡಾನೆ ಸೆರೆಗೆ ಮತ್ತೆ ಅನುಮತಿ ನೀಡಿರೋದ್ರಿಂದ ಬಿಡಾರಕ್ಕೆ ವಾಪಸ್ ಹೋಗಿದ್ದ ಕುಮ್ಕಿ ಆನೆಗಳು ಮತ್ತೆ ವಾಪಸ್ ಬಂದಿವೆ.
ಇಂದಿನಿಂದ ಮೂವರನ್ನ ಎನ್.ಆರ್.ಪುರದ ಮುತ್ತಿನಕೊಪ್ಪ ಗ್ರಾಮದಲ್ಲಿ ಕಾಡಾನೆ ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ, ಒಮ್ಮೆ ಕುಮ್ಕಿ ಆನೆಗಳನ್ನ ತಂದು–ತೆಗೆದುಕೊಂಡು ಹೋಗಲು ಲಕ್ಷಾಂತರ ಖರ್ಚು ಬರುತ್ತೆ. ಅಧಿಕಾರಿಗಳು–ಸರ್ಕಾರ 3–4 ದಿನಕ್ಕೆ ಆನೆಗಳನ್ನ ಸಾಗಾಟ ಮಾಡ್ತಿರೋದು ಸರ್ಕಾರದ ಬೊಕ್ಕಸಕ್ಕೆ ನಷ್ಟವಲ್ಲವೇ ಎಂದು ಜನ ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD