ಆ್ಯಂಟಿ ಕಮ್ಯುನಲ್ ವಿಂಗ್: ಸರಕಾರ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲು ಮುಂದಾಗಿದೆ: ಶಾಸಕ ಯಶ್ಪಾಲ್ ಸುವರ್ಣ - Mahanayaka

ಆ್ಯಂಟಿ ಕಮ್ಯುನಲ್ ವಿಂಗ್: ಸರಕಾರ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲು ಮುಂದಾಗಿದೆ: ಶಾಸಕ ಯಶ್ಪಾಲ್ ಸುವರ್ಣ

mal yashpal suuvarna
16/06/2023


Provided by

ಉಡುಪಿ: ರಾಜ್ಯ ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರವಾಗಿರಿಸಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಲು ಹೊರಟಿದ್ದು, ಇದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲು ಸರಕಾರ ಮುಂದಾಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿರುವ ಧಾರ್ಮಿಕ ಕೇಂದ್ರಗಳಿಗೆ ಬರುವ ಭಕ್ತರಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ವೈಧ್ಯಕೀಯ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಪೋಷಕರಲ್ಲಿ ಈ ವಿಂಗ್ ಆತಂಕಕ್ಕೆ ಕಾರಣವಾಗಲಿದೆ. ತಮ್ಮ ಮಕ್ಕಳನ್ನ ಕಾಲೇಜುಗಳಿಗೆ ಕಳುಹಿಸಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗುತ್ತದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿಗೆ ವಿಪುಲ ಅವಕಾಶ ಇದೆ. ಆದರೆ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿಯನ್ನ ಬದಿಗಿಟ್ಟು ಒಂದು ಸಮುದಾಯದ ಓಲೈಕೆಗೆ ಮುಂದಾಗಿದೆ. ಮಂಗಳೂರಿನಲ್ಲಿ ಎನ್‌ಐಎ ಘಟಕ ಸ್ಥಾಪನೆಗೆ ಕಾಂಗ್ರೆಸ್ ನಾಯಕರು ಹಾಗೂ ಎಸ್ ಡಿಪಿಐ ಸಂಘಟನೆ ಸಹಕಾರ ನೀಡಿಲ್ಲ. ಆದರೆ ಆ್ಯಂಟಿ ಕಮ್ಯುನಲ್ ವಿಂಗ್ ಪ್ರಾರಂಭಕ್ಕೆ ಎಸ್‌ಡಿಪಿಐ ಮೊದಲು ಸ್ವಾಗತಿಸಿದೆ. ಇದರಿಂದ ಎಸ್‌ಡಿಪಿಐ ನಿಜ ಬಣ್ಣ ಬಯಲಾಗಿದೆ. ಎಸ್‌ಡಿಪಿಐ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್ ಹಿಂದಿನ ಬಾಗಿಲಿನಿಂದ ಬಂದು ಎಸ್ಡಿಪಿಐ ಜೊತೆ ಕೈ ಜೋಡಿಸಿದೆ ಎಂದು ದೂರಿದರು.

ಕೆಜೆ ಹಳ್ಳಿ ಡಿಜೆ ಹಳ್ಳಿ ಗಂಭೀರವಾಗಿ ಪರಿಗಣಿಸದ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡ ಜಿಲ್ಲೆಯನ್ನ ಟಾರ್ಗೆಟ್ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆ ಹಾಗೂ ಅಭಿವೃದ್ಧಿಗೆ ಕೊಡಲಿ ಏಟು ಹಾಕುವ ಕೆಲಸಕ್ಕೆ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಈ ವ್ಯವಸ್ಥೆ ಪುನರ್ ಪರಿಶೀಲನೆ ಮಾಡಬೇಕು. ಆ್ಯಂಟಿ ಕಮ್ಯುನಲ್ ವಿಂಗ್ ಯಾವ ಚೌಕಟ್ಟಿನಲ್ಲಿ ಕೆಲಸ ಮಾಡಲಿದೆ ಅನ್ನೋದನ್ನ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದರು.

ಐದು ಭಾಗ್ಯ ಜಾರಿ ಮಾಡಲು ಹೊರಟಿರುವ ಸರ್ಕಾರಕ್ಕೆ ಆರ್ಥಿಕ ಮೂಲದ ಸ್ಪಷ್ಟತೆ ಇಲ್ಲ. ಜನರನ್ನ ದಿಕ್ಕು ತಪ್ಪಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಮತಾಂತರ ನಿಷೇಧ ಕಾನೂನು ಹಿಂಪಡೆಯುವ ಹೇಳಿಕೆ ಮರುಪರಿಶೀಲಸ ಬೇಕು. ಓಟ್ ಬ್ಯಾಂಕಿಂಗ್ ಗೆ ಈ ರೀತಿಯ ಹೇಳಿಕೆ ಸರಿಯಲ್ಲ ಎಂದು ಅವರು ಹೇಳಿದರು.

ಪಠ್ಯ ಪುಸ್ತಕದಲ್ಲಿ ದೇಶಭಕ್ತರ ವಿಚಾರಗಳೇ ಇದ್ದವು. ನಮ್ಮ ಮಕ್ಕಳು ನಮ್ಮೂರಿನ ಇತಿಹಾಸ ತಿಳಿದುಕೊಳ್ಳಬೇಕು. ಸಿದ್ದರಾಮಯ್ಯ ಅವರ ಕಮ್ಯುನಲ್ ಸರ್ಕಾರ ಒಂದು ಸಮಯದಾಯದ ಓಲೈಕೆಗೆ ಪಠ್ಯ ಬದಲಾವಣೆಗೆ ಮುಂದಾಗಿದೆ. ಪಠ್ಯ ಪುಸ್ತಕ ಬದಲಾವಣೆ ವಿಚಾರದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಆರೋಪಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ