ಪಾರ್ಲಿಮೆಂಟ್ ಚುನಾವಣೆ ಹಾಸುಪಾಸಿನಲ್ಲಿ ಸರ್ಕಾರ ಬೀಳಬಹುದು: ಸಿ.ಟಿ.ರವಿ ಹೇಳಿಕೆ

ಚಿಕ್ಕಮಗಳೂರು : ಪಾರ್ಲಿಮೆಂಟ್ ಚುನಾವಣೆ ಹಾಸುಪಾಸಿನಲ್ಲಿ ಸರ್ಕಾರ ಬೀಳಬಹುದು ಎಂದು ಮಾಜಿ ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ನನಗೆ ಭವಿಷ್ಯ ಹೇಳಲು ಬರಲ್ಲ, ಯತ್ನಾಳ್ ಅವರಿಗೆ ನಿಖರ ಮಾಹಿತಿ ಇರಬಹುದು. ಒಳ ಆಕ್ರೋಶ ಸ್ಫೋಟಗೊಂಡು ಸರ್ಕಾರ ಬಿದ್ದರೂ ಬೀಳಬಹುದು. ಅಸಹನೆಯ ಆಕ್ರೋಶಕ್ಕೆ ತುತ್ತಾಗಿ ಸರ್ಕಾರ ಬಿದ್ದರೂ ಬೀಳಬಹುದು ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಒಳಗಿನ ಉಸಾಬರಿ ನಮಗೆ ಏಕೆ? ಗ್ರಾಮ ಪಂಚಾಯಿತಿಯಂತೆ ಮುಖ್ಯಮಂತ್ರಿ ಹಂಚಿಕೆಯೂ ಆಗಿದೆ ಅನ್ನೋ ಮಾಹಿತಿ ಇದೆ, ಮುನಿಯಪ್ಪ ಹೇಳಬೇಕೆಂದರೆ ಒಳಗಡೆ ಏನೋ ನಡೆದಿರಬಹುದು ನನಗೆ ಗೊತ್ತಿಲ್ಲ, ಸರ್ಕಾರ ಬಂದು ಮೂರು ತಿಂಗಳಾಗಿಲ್ಲ, ಈಗಲೇ 30 ಶಾಸಕರು ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಪತ್ರಕ್ಕೆ ಬೆಲೆ ಇಲ್ಲ, ದಲ್ಲಾಳಿಗಳ ಮೂಲಕ ಕೆಲಸ ಆಗುತ್ತೆ ಅಂತ ಪತ್ರ ಬರೆದಿರುವುದು ಇರಬಹುದು, ರಾಯರೆಡ್ಡಿ, ಕರಪ್ಟ್ ಬ್ರಾಂಡ್ ಕರ್ನಾಟಕ ಅಂತ ಗುರುತಿಸಿಕೊಳ್ಳುವುದರ ಬಗ್ಗೆ ಅಸಹನೆ ಹೊರಹಾಕಿರುವುದು ಇರಬಹುದು. ಇದನ್ನೆಲ್ಲಾ ಗಮನಿಸಿದಾಗ ಎಲ್ಲವೂ ಸರಿ ಇಲ್ಲ ಅನ್ನೋ ಸಂದೇಶ ಕೊಡುತ್ತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ರು.
ಸರ್ಕಾರಕ್ಕೆ ಜನಾಕ್ರೋಶ ಒಂದೆರಡು ತಿಂಗಳಲ್ಲಿ ನಿರ್ಮಾಣ ಆಗಲ್ಲ. ಉಚಿತ ಕರೆಂಟ್ ಜೊತೆಗೆ ಪವರ್ ಕಟ್ ಕೊಡುಗೆಯನ್ನು ಕೊಡುತ್ತಿದ್ದಾರೆ. ಯಾವ ಕಾಲದಲ್ಲೂ ಮಳೆಗಾಲದಲ್ಲಿ ಪವರ್ ಕಟ್ ಆಗುತ್ತಿರಲಿಲ್ಲ. ಇದು ಜನರಿಗೆ ಅಸಹನೆ ನಿರ್ಮಾಣ ಆಗುತ್ತಿದೆ. ಅಸಹನೆಯ ಆಕ್ರೋಶ ಎಂತಹ ಬಲಾಢ್ಯರನ್ನು ಬಲಿ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.