ಕಾಡಾನೆ ಹಾವಳಿಯಿಂದ ಶಾಶ್ವತ ಪರಿಹಾರಕ್ಕೆ ಸರಕಾರ ಮುಂದಾಗಬೇಕು: ವಿನಯ್ ಹಳಕೋಟೆ

ಮೂಡಿಗೆರೆ: ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ರೈತರು ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿದೆ. ರಾತ್ರಿ ವೇಳೆ ಜನರು ತಿರುಗಾಡದ ಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳಿಂದ ಶಾಶ್ವತ ಮುಕ್ತಿಗಾಗಿ ಸರಕಾರ ಕೂಡಲೇ ಕ್ರಮ ವಹಿಸಬೇಕೆಂದು ಬಿಜೆಪಿ ತಾಲೂಕು ವಕ್ತಾರ ವಿನಯ್ ಹಳೆಕೋಟೆ ಒತ್ತಾಯಿಸಿದ್ದಾರೆ.
ಗುರುವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು, ತಾಲೂಕಿನಲ್ಲಿ ಹಿಂದೆಂದೂ ಕಂಡರಿಯದಂತ ಕಾಡಾನೆಗಳ ಗುಂಪು ಕಾಣಸಿಗುತ್ತಿದೆ. ತಾಲೂಕಿನ ಜಿ.ಹೊಸಳ್ಳಿ, ಹೊಸಪುರ, ಕಸ್ಕೆಬೈಲ್ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಅಧಿಕ ಕಾಡಾನೆಗಳು ಸಂಚರಿಸುತ್ತಿವೆ. ಕುಂದೂರು ಭಾಗದಲ್ಲಿ ಸುಮಾರು 20ಕ್ಕೂ ಅಧಿಕ ಕಾಡಾನೆಗಳಿವೆ. ಗುರುವಾರ 2 ಕಾಡಾನೆಗಳು ದುಂಡುಗ ಬಳಿ ಭತ್ತದ ಗದ್ದೆ ನಾಶಪಡಿಸಿ, ಟಿಲ್ಲರ್‌ನ್ನು ಧ್ವಂಸಗೊಳಿಸಿದೆ. ಅಲ್ಲದೇ ಕಾಡಾನೆಗಳು ಬೀಡು ಬಿಟ್ಟಿರುವ ಸುತ್ತಮುತ್ತಲಿನ ಗ್ರಾಮದ ತೋಟ, ಗದ್ದೆಗಳನ್ನೆಲ್ಲಾ ನಾಶ ಪಡಿಸುತ್ತಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದು, ತೋಟದ ಕೆಲಸಕ್ಕೆ ತೆರಳುವ ಕಾರ್ಮಿಕರು ಹಾಗೂ ಗ್ರಾಮದ ಜನರು ಹೊರಗಡೆ ತಿರುಗಾಡಲು ಭಯ ಪಡುವ ಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕಾಡಾನೆಗಳ ಹಾವಳಿಯಿಂದ ಸುಮಾರು 2 ಸಾವಿರ ಕ್ಕೂ ಅಧಿಕ ಎಕರೆ ಕೃಷಿ ಭೂಮಿ ಪಾಳು ಬಿಡಲಾಗಿದೆ. ಅಲ್ಲದೇ ಕಾಡಾನೆಗಳು ಮನೆ ಮುಂದೆ ಬಂದು ನಿಂತುಕೊಳ್ಳುತ್ತಿವೆ. ಇದರಿಂದ ಜನರು ಕಾಡು ಪ್ರಾಣಿಗಳ ಜತೆಗೆ ವಾಸ ಮಾಡುವಂತಹ ಪರಿಸ್ಥಿತಿ ಒಂದೊದಗಿದೆ. ಸರಕಾರದ ಆದೇಶ ಮೀರಿ ಅರಣ್ಯ ಇಲಾಖೆ ಯಾವುದೇ ಕ್ರಮ ವಹಿಸಲು ಸಾಧ್ಯವಿಲ್ಲ. ಹಾಗಾಗಿ ಜನರು ಯಾವ ಸಮಯದಲ್ಲಾದರೂ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಇಂತಹ ಗಂಭೀರ ವಿಚಾರವನ್ನು ಶಾಸಕರು ಸರಕಾರದ ಗಮನ ಸೆಳೆದು ಕಾಡಾನೆಗಳಿಂದ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: