ಬಡಜನತೆಗೆ ಸಂಜೀವಿನಿಯಾಗಿರುವ ಗೃಹ ಲಕ್ಷ್ಮೀ ಯೋಜನೆ

gruhalakshmi
20/02/2024

ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯ ಹಣ ಎಷ್ಟೋ ಬಡ ಕುಟುಂಬಗಳ ಕಣ್ಣೀರು ಒರೆಸುತ್ತಿದೆ ಎನ್ನುವುದು ಸತ್ಯ. ರಾಜ್ಯದಲ್ಲಿ ರಾಜಕೀಯ ತಿಕ್ಕಾಟಗಳು ಏನೇ ಇರಲಿ, ಇವೆಲ್ಲವನ್ನೂ ಮೀರಿದ ಮಾನವೀಯತೆ ಗೃಹಲಕ್ಷ್ಮೀ ಎಂದು ಹೇಳಬಹುದು.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವೃದ್ಧೆಯ ಮಗ ಅನಾರೋಗ್ಯದಿಂದ ನಿಧನರಾಗಿದ್ದರು. ಮಗನ ಮೃತದೇಹದ ಮುಂದೆ ಕಣ್ಣೀರು ಹಾಕಿದ ವೃದ್ಧೆ, “ಯವ್ವಾ, ನೀ ಬದುಕಾಕ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಬರ್ತಾವ ಬಿಡು” ಎಂದು ಮಗ  ಸಾಯುವ ಮೊದಲು ಹೇಳಿದ್ದ ಎನ್ನುವ ವಿಚಾರವನ್ನು ಆ ತಾಯಿ ತನ್ನ ಪುತ್ರನ ಸಾವಿನ ನೋವಿನ ನಡುವೆ ನೆನಪು ಮಾಡಿಕೊಂಡು ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು. ಮಾತ್ರವಲ್ಲದೇ ಜೀವನಾಧಾರಕ್ಕೆ ದಿಕ್ಕಿಲ್ಲ ಎನ್ನುವ ಎಷ್ಟೋ ಕುಟುಂಬಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ ನೆರವಾಗುತ್ತಿದೆ ಎನ್ನುವುದು  ಅಷ್ಟೇ ಸತ್ಯವಾಗಿದೆ.

ಇನ್ನೂ ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯಿಸಿದ್ದು,  ಅನಾರೋಗ್ಯದಿಂದ ಅಕಾಲಿಕ ಮರಣಕ್ಕೆ ತುತ್ತಾದ ಈ ಬಡತಾಯಿಯ ಮಗನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

‘ಗೃಹಲಕ್ಷ್ಮಿ ಯೋಜನೆ ದುಡ್ಡು ನಿನಗೆ ಬರುತ್ತೆ, ನಾನಿಲ್ಲ ಎಂದು ಚಿಂತಿಸಬೇಡ’ ಎಂದು ಮಗನ ಮಾತನ್ನು ನೆನಪು ಮಾಡಿಕೊಂಡು ಆತನ ಶವದೆದುರು ತಾಯಿ ರೋದಿಸುತ್ತಿರುವುದನ್ನು ನೋಡಿ ಎದೆ ಭಾರವಾಯಿತು. ಯಾವ ತಾಯಿಗೂ ಎದೆಯೆತ್ತರಕ್ಕೆ ಬೆಳೆದ ಮಗನ ಚಿತೆಗೆ ಅಗ್ನಿಸ್ಪರ್ಶ ಮಾಡುವ ಸ್ಥಿತಿ ಬಾರದಿರಲಿ ಎಂದಿದ್ದಾರೆ

ನಾವು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ ದಿನದಿಂದ ಇಂದಿನ ವರೆಗೆ ಕೆಲವರಿಂದ ಅಪಪ್ರಚಾರ, ಟೀಕೆ, ವ್ಯಂಗ್ಯಗಳು ವ್ಯಕ್ತವಾಗುತ್ತಲೇ ಇದೆ, ಇದಾವುದಕ್ಕೂ ನಾನು ತಲೆಕೆಡಿಕೊಂಡಿಲ್ಲ. ಕಾರಣ ಇಂತಹ ಲಕ್ಷಾಂತರ ಬಡತಾಯಂದಿರಿಗೆ ನಮ್ಮ ಯೋಜನೆ ಮೂರು ಹೊತ್ತು ನೆಮ್ಮದಿಯ ಅನ್ನ ನೀಡಿ ಬದುಕಿಗೆ ಆಧಾರವಾಗಿದೆ. ಬಡತನ, ಹಸಿವು, ಅನಾಥಭಾವ ಅನುಭವಿಸಿದವರಿಗಷ್ಟೇ ಅದರ ನೋವು, ಹತಾಶೆ ಅರಿವಾಗಲು ಸಾಧ್ಯ. ಈ ತಾಯಿಯ ಜೊತೆ ನಮ್ಮ ಸರ್ಕಾರ ಇದೆ, ಮಗನ ಸಾವಿನ ದುಃಖದಿಂದ ಆದಷ್ಟು ಬೇಗ ಹೊರಬರಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version