ಗ್ಯಾರಂಟಿಗಳು ತಾತ್ಕಾಲಿಕ: ಎಸ್ಸಿ ಎಸ್ಟಿ ಅನುದಾನ ದುರ್ಬಳಕೆ ಅಕ್ಷಮ್ಯ: SC / ST ಜನಾಂದೋಲನ ಅಂಗವಾಗಿ ವಿಚಾರ ಸಂಕಿರಣ - Mahanayaka
4:37 AM Wednesday 17 - September 2025

ಗ್ಯಾರಂಟಿಗಳು ತಾತ್ಕಾಲಿಕ: ಎಸ್ಸಿ ಎಸ್ಟಿ ಅನುದಾನ ದುರ್ಬಳಕೆ ಅಕ್ಷಮ್ಯ: SC / ST ಜನಾಂದೋಲನ ಅಂಗವಾಗಿ ವಿಚಾರ ಸಂಕಿರಣ

sc st
03/09/2023

ಇಂದು ಮೈಸೂರಿನ ನಂಜರಾಜ ಬಹಾದ್ದೂರ್ ಛತ್ರದಲ್ಲಿ ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆ, ಕರ್ನಾಟಕ ಇವರ ವತಿಯಿಂದ ನಡೆದ SCSP ಮತ್ತು TSP ಅನುದಾನದ ಸದ್ಬಳಕೆಗಾಗಿ SC / ST ಜನಾಂದೋಲನದ ಅಂಗವಾಗಿ ನಡೆಸಿದ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.


Provided by

ಸಮಾರಂಭದಲ್ಲಿ ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯ ಮುಖಂಡ ಭೀಮನಹಳ್ಳಿ ಸೋಮೇಶ್ ರವರು ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆ ಮಾಡಿದ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಚೋರನಹಳ್ಳಿ ಶಿವಣ್ಣರವರು SCSP ಮತ್ತು TSP ಅನುದಾನ ದುರ್ಬಳಕೆ ಮಾಡಿರುವ ಮುಖ್ಯಮಂತ್ರಿಗಳ ಮೇಲೆ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಬೇಕೆಂದರು.

ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯ ಮುಖಂಡ ಕೆ. ಎನ್. ಪ್ರಭುಸ್ವಾಮಿ “SCSP ಮತ್ತು TSP ಅನುದಾನದ ಸದ್ಬಳಕೆ” ವಿಷಯವಾಗಿ ಪ್ರಬಂಧ ಮಂಡಿಸಿದರು. ಸಮಾರಂಭದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಸೋಸಲೆ ರಾಜಶೇಖರ್, ಲೋಕೇಶ್ ಎಂ., ಸಂಶೋಧಕರು, ಮೈಸೂರು ವಿವಿ.., ಎಸ್ಸಿ ಎಸ್ಟಿ ಉದ್ದಿಮೆದಾರರ ಸಂಘದ ಅಧ್ಯಕ್ಷ ಮಂಜುನಾಥ್, ಹಾಗೂ ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯ ವಿವಿಧ ಜಿಲ್ಲೆಗಳ ಮುಖಂಡರುಗಳು ಭಾಗವಹಿಸಿದ್ದರು.

ಸಂಕಿರಣದಲ್ಲಿ ಪ್ರಸ್ತಾಪವಾದ ಪ್ರಮುಖ ವಿಚಾರಗಳು:

 ಗ್ಯಾರಂಟಿ ಸ್ಕೀಮುಗಳಿಗೆ 2023-24 ನೇ ಸಾಲಿನಲ್ಲಿ 11,144 ಕೋಟಿಗಳನ್ನು SCSP ಮತ್ತು TSP ಅನುದಾನದಿಂದ ಕಸಿದಿರುವುದರಿಂದ ಅಭಿವೃದ್ಧಿ ನಿಗಮಗಳಿಗೆ ನೀಡಿರುವ ಹಣ ಅತ್ಯಂತ ಕಡಿಮೆಯಾಗಿದೆ.

* ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 100 ಕೋಟಿ,

* ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ 50 ಕೋಟಿ,

*  ತಾಂಡಾ (ಬಂಜಾರ) ಅಭಿವೃದ್ಧಿ ನಿಗಮಕ್ಕೆ 60 ಕೋಟಿ,

* ಭೋವಿ ಅಭಿವೃದ್ಧಿ ನಿಗಮಕ್ಕೆ 55 ಕೋಟಿ,

* ಸಫಾಯಿ ಕರ್ಮಚಾರಿ (ಪೌರಕಾರ್ಮಿಕ) ಅಭಿವೃದ್ಧಿ ನಿಗಮಕ್ಕೆ 55 ಕೋಟಿ,

* ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ 175 ಕೋಟಿ, ಹಾಗೂ

* ಡಾ.ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ನಿಗಮಕ್ಕೆ 25 ಕೋಟಿ ಅನುದಾನಗಳನ್ನು ಮೀಸಲಿಟ್ಟಿದ್ದು,

ಒಟ್ಟಾರೆ ಆರ್ಥಿಕಾಭಿವೃದ್ಧಿ ಕಾರ್ಯಕ್ರಮಗಳಿಗೆ ಕೇವಲ 510 ಕೋಟಿಗಳನ್ನು ಮೀಸಲಿಟ್ಟು ಪರಿಶಿಷ್ಟರಿಗೆ ವಂಚಿಸಿದೆ. ಅಲ್ಲದೇ ಈ ಸಾಲಿನಲ್ಲಿ ಭೂ ಒಡೆತನ, ಸಮೃದ್ಧಿ, ಐರಾವತ ಹಾಗೂ ಸ್ವಯಂ ಉದ್ಯೋಗ ಯೋಜನೆಗಳಿಗೆ ಹಣವನ್ನೇ ಮೀಸಲಿಟ್ಟಿಲ್ಲ. SCSP ಮತ್ತು TSP ಅನುದಾನದ ಪೈಕಿ ಕೇವಲ 2% ಗಿಂತ ಕಡಿಮೆ ಹಣವನ್ನು ಮೀಸಲಿರಿಸದೆ.

ಇನ್ನು ಕಳೆದ ಸಾಲಿನಲ್ಲಿ 04 ಅಭಿವೃದ್ಧಿ ನಿಗಮಗಳಲ್ಲಿ ಸ್ವೀಕೃತವಾಗಿರುವ ಭೂ ಒಡೆತನ ಯೋಜನೆಯ ಪ್ರಸ್ತಾವನೆಗಳಿಗೆ ಒಟ್ಟು 1,169 ಕೋಟಿ ಅನುದಾನ ಅಗತ್ಯವಿದ್ದು, ಗಂಗಾ ಕಲ್ಯಾಣ ಯೋಜನೆಯಡಿ 650 ಕೋಟಿ ಅನುದಾನ ಅಗತ್ಯವಾಗಿದೆ.

ಸಮಾಜ ಕಲ್ಯಾಣ ಇಲಾಖೆಯ 1902 ವಸತಿ ನಿಲಯಗಳ ಪೈಕಿ 281 ವಸತಿ ನಿಲಯಗಳು ಬಾಡಿಕೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಇದಕ್ಕಾಗಿ ವಾರ್ಷಿಕ 3,15,95,285 ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಅಲ್ಲದೇ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿಯೂ ಸಹ 100 ಕ್ಕೂ ಹೆಚ್ಚು ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಇಕ್ಕಟ್ಟಾದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳನ್ನು ಇದೇ ಸಾಲಿನಲ್ಲಿಯೇ ಸ್ವಂತ ಕಟ್ಟಡಕ್ಕೆ ಸ್ಥಾಳಾಮತರಿಸಿ ಎಂದು ಆಗ್ರಹಿಸಲಾಗಿದೆ.

SCSP ಮತ್ತು TSP ಯೋಜನೆಯಡಿ ಹಂಚಿಕೆಯಾಗುವ ಅನುದಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಆದಾಯ ವೃದ್ಧಿಸುವಂತಿರಬೇಕು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಉತ್ತಮಪಡಿಸುವಂತಿರಬೇಕು. ಯೋಜನಾ ಆಯೋಗದ ಶಿಫಾರಸ್ಸುಗಳಂತೆ ಶಿಕ್ಷಣ, ಆರೋಗ್ಯ, ವಸತಿ, ಮೂಲ ಸೌಕರ್ಯ ಹಾಗೂ ಆದಾಯ ಹೆಚ್ಚಳ ಮಾಡುವ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ರೂಪಿಸಿ ಕನಿಷ್ಟ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಬೇಕಿದೆ. ಅದಕ್ಕಾಗಿ ಈ ಕೆಳಗಿನಂತೆ ಯೋಜನೆಗಳನ್ನು ರೂಪಿಸಬೇಕಿದೆ.

* ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಕ್ಕೆ                            –    40%

* ಆರೋಗ್ಯ ಕ್ಷೇತ್ರಕ್ಕೆ                                                     –    10%

 * ವಸತಿಯೂ ಸೇರಿ ಮೂಲಭೂತ ಸೌಕರ್ಯಕ್ಕೆ           –    25%

* ಆರ್ಥಿಕ ಅಭಿವೃದ್ಧಿ ಯೋಜನೆಗಳಿಗೆ                             –    25%

 

 ಶಿಕ್ಷಣ ಮತ್ತು ಉದ್ಯೋಗ: SCSP ಮತ್ತು TSP ಯೋಜನೆಯ ಒಟ್ಟು 34,294 ಕೋಟಿ ರೂಪಾಯಿಗಳ ಪೈಕಿ  40% ಅನುದಾನವನ್ನು ಅಂದರೆ, 13,718 ಕೋಟಿಗಳನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು. ಇದರಲ್ಲಿ SC, ST ಗಳಿಗಾಗಿ ಮಾತ್ರ ಇರುವ ಶಾಲೆಗಳ ನಿರ್ಮಾಣ, ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ವಸತಿ ನಿಲಯ ಹಾಗೂ ವಸತಿ ಶಾಲೆಗಳನ್ನು ಆದ್ಯತೆ ಮೇಲೆ ನಿರ್ಮಿಸುವುದು. ಎಲ್ಲಾ ಹಂತದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಹಾಗೂ ಪ್ರವೇಶ ಶುಲ್ಕ, ಬೋದನಾ ಶುಲ್ಕ ಗಳನ್ನು ಪಾವತಿ ಮಾಡುವುದು. ಇದಕ್ಕೆ ಸಂಬಂಧಿಸಿ ಶುಲ್ಕ ರಹಿತವಾಗಿ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿSC, ST ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದು. ವಿದ್ಯಾರ್ಥಿಗಳಿಗೆ ಗುಣಾತ್ಮಕ ಹಾಗೂ ಉದ್ಯೋಗ ಹೊಂದಲು ಪೂರಕವಾದ ಶಿಕ್ಷಣ, ಸಂವಹನ ಕೌಶಲಗಳ ತರಬೇತಿ, ಉನ್ನತ ಮಟ್ಟದ ಕಂಪ್ಯೂಟರ್ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ನೀಡುವುದು. ಹೀಗೆ SC, ST ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನೀಡುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮಾಡುವುದು. ನಿಗದಿತ ಕಾಲಮಿತಿಯೊಳಗೆ ಬಾಕಿ ‌ಉಳಿದಿರುವ ಎಲ್ಲಾ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವುದು.

ಆರೋಗ್ಯ ಕ್ಷೇತ್ರ: SCSP ಮತ್ತು TSP ಯೋಜನೆಯ ಒಟ್ಟು 34,294 ಕೋಟಿ ರೂಪಾಯಿಗಳ ಪೈಕಿ  10% ಅನುದಾನವನ್ನು ಅಂದರೆ, 3,429 ಕೋಟಿಗಳನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಬೇಕು. ಇದರಲ್ಲಿ ಕರ್ನಾಟಕದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಾನವ ಅಭಿವೃದ್ಧಿ ಸೂಚ್ಯಂಕ 0.49 ಮತ್ತು 0.44 ಆಗಿದ್ದು, ಇದನ್ನು ಉತ್ತಮಪಡಿಸಲು ಅಗತ್ಯ ಕ್ರಮ ಕೈಗೊಳ್ಳುವುದು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆರೋಗ್ಯದ ಅರಿವು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅಸಯೋಜಿಸಿ ಜನತೆಗೆ ಆರೋಗ್ಯದ ಸಾಮಾನ್ಯ ತಿಳುವಳಿಕೆ ಮೂಡಿಸುವುದು. ಆಗಿಂದಾಗ್ಗೆ ಆರೋಗ್ಯ ತಪಾಸಣೆ ಮಾಡುವುದು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಹಾಗೂ ಉಚಿತ ಚಿಕಿತ್ಸೆಗಳನ್ನು ನೀಡುವುದು. ಶಿಶು ಮರಣ, ತಾಯಿ ಮರಣ ಹಾಗೂ ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದು. ವೈವಿದ್ಯಮಯ ಆಹಾರ ಪದ್ಧತಿಯನ್ನು ರೂಡಿಸಲು ಅಗತ್ಯ ಕ್ರಮ ಕೈಗೊಳ್ಳುವುದು.

 

ವಸತಿ ಸೇರಿದಂತೆ ಮೂಲ ಸೌಕರ್ಯ: SCSP ಮತ್ತು TSP ಯೋಜನೆಯ ಒಟ್ಟು 34,294 ಕೋಟಿ ರೂಪಾಯಿಗಳ ಪೈಕಿ 25% ಅನುದಾನವನ್ನು ಅಂದರೆ, 8,573 ಕೋಟಿಗಳನ್ನು ಮೂಲ ಸೌಕರ್ಯ ಕ್ಷೇತ್ರಕ್ಕೆ ಮೀಸಲಿಡಬೇಕು. ಇದರಲ್ಲಿ ವಸತಿ ಹೀನರಾಗಿರುವ ಸುಮಾರು 5 ಲಕ್ಷ ಪರಿಶಿಷ್ಟ ಕುಟುಂಬಗಳಿಗೆ ಈ 5 ವರ್ಷಗಳಲ್ಲಿ ತಲಾ 5 ಲಕ್ಷ ವೆಚ್ಚ ಮಾಡಿ ವಸತಿ ನಿರ್ಮಿಸಿಕೊಡುವುದು. ನಿವೇಶನ ರಹಿತರಿಗೆ ಆದ್ಯತೆಯ ಮೇರೆಗೆ ನಿವೇಶನ ಹಂಚಿ ಬದ್ದತೆಯನ್ನು ತೋರುವುದು. ಪರಿಶಿಷ್ಟರು ವಾಸಿಸುವ ಪ್ರದೇಶಗಳಿಗೆ ಪ್ರತಿ ಮನೆಗೂ ಶುದ್ಧ ಕುಡಿಯುವ, ಶೌಚ ಹಾಗೂ ಸ್ನಾನ ಗೃಹಗಳ ನಿರ್ಮಾಣ, ಒಳಚರಂಡಿ ವ್ಯವಸ್ಥೆ ಹಾಗೂ ಪಕ್ಕಾ ರಸ್ತೆಗಳ ನಿರ್ಮಾಣ ಮಾಡುವುದು. ಸಮುದಾಯದ ಚಟುವಟಿಕೆಗಳಿಗೆ ಅಗತ್ಯವಾದ ಸುಸಜ್ಜಿತ ಸಮುದಾಯ ಭವನಗಳ ನಿರ್ಮಾಣ ಮಾಡುವುದು. ಹೀಗೆ ಕಳಪೆಯಾಗದ, ಗುಣಾತ್ಮಕ ಹಾಗೂ ದೀರ್ಘ ಬಾಳಿಕೆ ಬರುವ ಕಾಮಗಾರಿಗಳನ್ನು ನಿರ್ಮಾಣ ಮಾಡುವುದು.

 

ಆರ್ಥಿಕ ಅಭಿವೃದ್ಧಿ: SCSP ಮತ್ತು TSP ಯೋಜನೆಯ ಒಟ್ಟು 34,294 ಕೋಟಿ ರೂಪಾಯಿಗಳ ಪೈಕಿ 25% ಅನುದಾನವನ್ನು ಅಂದರೆ, 8,573 ಕೋಟಿಗಳನ್ನು ಆರ್ಥಿಕ ಅಭಿವೃದ್ಧಿಗಾಗಿ ಮೀಸಲಿಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯಾ ಅಭಿವೃದ್ಧಿ ನಿಗಮಗಳಿಗೆ ಜಾತಿ ಜನಸಂಖ್ಯಾವಾರು ಅನುದಾನ ಹಂಚಿಕೆ ಮಾಡಬೇಕು.

ಪರಿಶಿಷ್ಟರಿಗೆ ಭೂಮಿ ಖರೀದಿಸಿ ನೀಡುವ ಭೂ ಒಡೆತನ ಯೋಜನೆ, ಕೃಷಿ ಭೂಮಿಗಳಿಗೆ ನೀರಾವರಿ ಕಲ್ಪಿಸುವ ಗಂಗಾ ಕಲ್ಯಾಣ, ಆರ್ಥಿಕ ಚಟುವಟಿಕೆ ನಡೆಸಲು ಪೂರಕವಾಗಿರುವ ಸಮೃದ್ಧಿ ಮತ್ತು ಸ್ವಯಂ ಉದ್ಯೋಗ ಯೋಜನೆ, ಪ್ರವಾಸಿ ಟ್ಯಾಕ್ಸಿ, ಸರಕು ಸಾಗಣೆ ವಾಹನ ಖರೀದಿ ಯೋಜನೆ, ಮಹಿಳಾ ಸ್ವಸಹಾಯ ಗುಂಪುಗಳ ಉಳಿತಾಯವನ್ನು ಉತ್ತೇಜಿಸುವ ಹಾಗೂ ಉಳಿತಾಯವನ್ನು ಆರ್ಥಿಕ ಚಟುವಟಿಕೆಗಳಿಗೆ ತೊಡಗಿಸುವ ಮೈಕ್ರೋ ಕ್ರೆಡಿಟ್ ಯೋಜನೆ ಹೀಗೆ ಮೊದಲಾದ ಯೋಜನೆಗಳನ್ನು ಕಡ್ಡಾಯವಾಗಿ ಕಾಲಕಾಲಕ್ಕೆ ಅನುಷ್ಠಾನಗೊಳಿಸುವುದು.

ಸಣ್ಣ ಕೈಗಾರಿಕೆ ಇಲಾಖೆಯ ಕೈಗಾರಿಕಾ ಷೆಡ್ ಹಾಗೂ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕೈಗಾರಿಕಾ ನಿವೇಶನ ಹಂಚಿಕೆ ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಿದ್ಧ ಉಡುಪು ಘಟಕ ಸ್ಥಾಪನೆಯಲ್ಲಿ ಪರಿಶಿಷ್ಟರಿಗೆ ನಿಯಮಾನುಸಾರ ಆದ್ಯತೆ ನೀಡುವುದು. ನಿಗಧಿಗಿಂತ ಹೆಚ್ಚಿನ ಅರ್ಜಿಗಳು ಬಂದರೆ ಹಿಂದಿ ಕೆಲವು ವರ್ಷಗಳಲ್ಲಿ ಕಡಿಮೆ ಹಂಚಿಕೆ ಮಾಡಿರುವುದರಿಂದ ಈ ಸಾಲಿನಲ್ಲಿ ಹೆಚ್ಚುವರಿಯಾಗಿ ಹಂಚಿಕೆ ಮಾಡಿ ಆಗಿರುವ ಅಸಮಾನತೆಯ್ನು ಸರಿಪಡಿಸಲು ಕಟ್ಟುನಿಟ್ಟಿನ ಕಾನೂನು ರೂಪಿಸಿ ಅನುಷ್ಠಾನಗೊಳಿಸುವುದು.

ರಾಷ್ಟ್ರೀಯ ಜಾನುವಾರು ಮಿಷನ್, ರಾಷ್ಟ್ರೀಯ ಗೋಕುಲ್ ಮಿಷನ್, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಹೀಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಎಲ್ಲಾ ವರ್ಗಗಳಿಗೂ 50% ಸಹಾಯಧನ ನಿಗದಿಮಾಡಿದ್ದು, ಹೆಚ್ಚುವರಿ 25% ಸಬ್ಸಿಡಿಯನ್ನು ನಿರುದ್ಯೋಗಿ ಯುವಕರಿಗೆ ಹಾಗೂ 40% ಸಬ್ಸಿಡಿಯನ್ನು ನಿರುದ್ಯೋಗಿ ಯುವತಿಯರಿಗೆ ರಾಜ್ಯ ಸರ್ಕಾರದ SCSP ಮತ್ತು TSP ಅನುದಾನದಿಂದ ನೀಡುವಂತಾದರೆ, ಕೃಷಿ ಕ್ಷೇತ್ರದಲ್ಲಿಯೂ ಸಹ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಪರಿಶಿಷ್ಟ ನಿರುದ್ಯೋಗಿಗಳಿಗೆ ಅನುಕೂಲವಾಗುತ್ತದೆ.

ಹೀಗೆ ಅನುದಾನ ಹಂಚಿಕೆ ಮಾಡಿ, ಬಳಕೆ ಹಾಗೂ ಅನುಷ್ಠಾನದ ಮೇಲೆ ಕಟ್ಟುನಿಟ್ಟಾಗಿ ಮೇಲುಸ್ತುವಾರಿ ಮಾಡಬೇಕಾಗಿದೆ. ಮೂಲಸೌಕರ್ಯ ಕಾಮಗಾರಿಗಳು ಪುನರಾವರ್ತನೆಯಾಗದಂತೆ, ಕಳಪೆಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಯೋಜನಾ ಆಯೋಗದ ಶಿಫಾರಸ್ಸಿನಂತೆ ಮ್ಯಾನುಯಲ್ ಸ್ಕಾವೆಂಜಿಂಗ್ ನ್ನು ನಿಲ್ಲಿಸಬೇಕಿದೆ. ತಾಂತ್ರಿಕ ಉಪಕರಣಗಳನ್ನು ಬಳಸಿ ಸ್ವಚ್ಛತಾ ಕಾರ್ಯಗಳನ್ನು ಮಾಡಬೇಕಿದೆ. ಇಂತಹ ತಂತ್ರಜ್ಞಾನಗಳಿಗಾಗಿ ಬಂಡವಾಳ ಹೂಡಬೇಕಿದೆ. ಬಜೆಟ್ ಪೂರ್ವ ಸಿದ್ಧತಾ ಸಭೆಗೆ ಕಾಟಾಚಾರಕ್ಕಾಗಿ ಸಭೆ ಕರೆಯದೇ ಪಕ್ಷಾತೀತವಾಗಿ ಪರಿಶಿಷ್ಟ ಸಮುದಾಯದ ಏಳಿಗೆಗಾಗಿ ಮಿಡಿಯುವ ಜ್ಞಾನಿ, ಕ್ರಿಯಾಶೀಲ ನಾಯಕರು, ಮುಖಂಡರು, ಸಂಘ ಸಂಸ್ಥೆಗಳನ್ನು ಕರೆದು ಅಭಿಪ್ರಾಯ ಪಡೆದು ಬಜೆಟ್ ರೂಪಿಸಬೇಕು.

ಇದಕ್ಕಾಗಿ ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆ, ಕರ್ನಾಟಕ ಮುಂದಡಿ ಇಟ್ಟಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಿಜವಾದ ಅಭಿವೃದ್ಧಿಗೆ ಪಣ ತೊಟ್ಟಿದೆ.

ರಾಜ್ಯಾದ್ಯಂತ SCSP ಮತ್ತು TSP ಅನುದಾನದ ಸದ್ಬಳಕೆಗಾಗಿ SC / ST ಜನಾಂದೋಲನ ನಡೆಸುತ್ತಿದೆ. ಸರ್ಕಾರಗಳು, ಸಚಿವರು, ಶಾಸಕರು, ಇತರೆ ಜನಪ್ರತಿನಿಧಿಗಳು, ಅನುಷ್ಠಾನ ಅಧಿಕಾರಿಗಳು, ಸಂಘಟನೆ ಹಾಗೂ ಪಕ್ಷಗಳ ಮುಖಂಡರು, ಕಾರ್ಯರ್ತರು ಪರಿಶಿಷ್ಟರ ಸ್ವಾವಲಂಬನೆ ಹಾಗೂ ಸ್ವಾಭಿಮಾನ ರೂಪಿಸುವಲ್ಲಿ ನಾವು ಪ್ರಮಾಣಿಕವಾಗಿ ನಡೆದುಕೊಳ್ಳುತ್ತಿದ್ದೇವೆಯೇ ಎಂಬ ಬಗ್ಗೆ ಮತ್ತೊಮ್ಮೆ ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು.

ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಚಿಂತಕರು:

ಚಾಮರಾಜನಗರ          :         ವಕೀಲ ರಾಜೇಂದ್ರ ಬೂದಿತಿಟ್ಟು,

ಮೈಸೂರು ವಿ. ವಿ.         :         ಸಂಶೋಧಕರುಗಳು : ಪ್ರದೀಪ್ ರಾಜ್, ಪ್ರತಾಪ್ ಡಿ, ದಿನಕರ್

ಮಂಡ್ಯ                        :         ಮಹೇಶ್ ಮಾಚಹಳ್ಳಿ, ವಕೀಲ ನಲ್ಲಹಳ್ಳಿ ಸುರೇಶ್

ಹಾಸನ                       :         ವಕೀಲ ಯೋಗೇಶ್, ನಾಗರಾಜು

ಚಿಕ್ಕಮಗಳೂರು         :         ಚಿದಂಬರ್

ರಾಮನಗರ               :         ನವೀನ್, ಲೋಕೇಶ್

ಆನೇಕಲ್                  :         ನರೇಂದ್ರ

ಇತ್ತೀಚಿನ ಸುದ್ದಿ