ಗುಜರಾತ್ ಮಾಡೆಲ್ ಈಗ ಹೇಗಿದೆ ಗೊತ್ತಾ? | ಒಂದು ಹೊತ್ತಿನ ಅನ್ನಕ್ಕೂ ಪರದಾಡುತ್ತಿರುವ ಜನ | ಸಮೀಕ್ಷೆಯಿಂದ ಸತ್ಯ ಬಯಲು - Mahanayaka
12:55 PM Saturday 23 - August 2025

ಗುಜರಾತ್ ಮಾಡೆಲ್ ಈಗ ಹೇಗಿದೆ ಗೊತ್ತಾ? | ಒಂದು ಹೊತ್ತಿನ ಅನ್ನಕ್ಕೂ ಪರದಾಡುತ್ತಿರುವ ಜನ | ಸಮೀಕ್ಷೆಯಿಂದ ಸತ್ಯ ಬಯಲು

27/12/2020


Provided by

ನವದೆಹಲಿ:  ಒಂದು ಕಾಲದಲ್ಲಿ ಇಡೀ ದೇಶದಲ್ಲಿಯೇ ಸುದ್ದಿಯಲ್ಲಿದ್ದ ಗುಜರಾತ್ ಮಾಡೆಲ್, ಈಗ ಹೇಗಿದೆ  ಗೊತ್ತಾ? ಒಂದು ತುತ್ತಿನ ಅನ್ನಕ್ಕೂ ಇಲ್ಲಿನ ಬಡ ಜನರು ಹಿಂದುಳಿದವರು ಪರದಾಡುತ್ತಿದ್ದಾರೆ. ಕೊವಿಡ್ 19 ಅಪ್ಪಳಿಸುವುದಕ್ಕೂ ಮೊದಲು ನಡೆಯುತ್ತಾ ಸಾಗುತ್ತಿದ್ದ ಇಲ್ಲಿನ ಜನರ ಬದುಕು ಈಗ ತೆವಲುತ್ತಾ ಸಾಗಿದೆ.

ಹೌದು..! ಇದು ಗುಜರಾತ್ ಜನತೆಯ ದುಸ್ಥಿತಿ. ಇಲ್ಲಿನ ಒಂಬತ್ತು ಜಿಲ್ಲೆಗಳಾದ ಅಹಮದಾಬಾದ್, ಆನಂದ್, ಭರೂಚ್, ಭಾವನಗರ, ದಾಹೋಡ್, ಮೊರ್ಬಿ, ನರ್ಮದಾ,  ಪಂಚಮಹಲ್ಸ್ ಮತ್ತು ವಡೋದರಾಗಳ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಸ್ಥಿತಿ ಕೊವಿಡ್ ಮಹಾಮಾರಿಯ ಬೆನ್ನಲ್ಲೇ ಶೋಚನೀಯ ಸ್ಥಿತಿಯಲ್ಲಿದೆ. ಕೊರೊನಾ ಸಂದರ್ಭದಲ್ಲಿ ಇಲ್ಲಿನ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದಾರೆ ಎಂದು ಹಂಗರ್ ವಾಚ್ ಸಮೀಕ್ಷೆಯಿಂದ ತಿಳಿದು ಬಂದಿದೆ.

ಸರ್ಕಾರದಿಂದ 5 ಪೈಸೆಯ ಉಪಯೋಗ ಇವರಿಗೆ ಆಗುತ್ತಿಲ್ಲ. ಸರ್ಕಾರದ ಯೋಜನೆಯಾದ ಅನ್ನ ಬ್ರಹ್ಮ ಯೋಜನೆಯು ಇನ್ನೂ ಇವರಿಗೆ ಲಭ್ಯವಾಗಿಲ್ಲ. ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಜನರಿಗೆ ಸರ್ಕಾರವು ಪಡಿತರ ನೀಡುವುದನ್ನು ಸ್ಥಗಿತಗೊಳಿಸಿದೆ. ಇದರ ಪರಿಣಾಮವಾಗಿ ಇಲ್ಲಿನ ಜನರು ಹಸಿವಿನಿಂದ ಮಲಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಮೀಕ್ಷೆಯು ಹೇಳಿದೆ.

ಗುಜರಾತ್ ನ ಹಿಂದುಳಿದ ಸಮುದಾಯಗಳ  403 ಮನೆಗಳ ಮೇಲೆ ಹಂಗರ್ ವಾಚ್ ಸಮೀಕ್ಷೆಯನ್ನು ಮಾಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ  ಇಲ್ಲಿನ ಅರಣ್ಯ ಪ್ರದೇಶವನ್ನು ನಿರ್ಬಂಧಿಸಿದ್ದರಿಂದಾಗಿ ತಿಂಗಳಿಗೆ ಕನಿಷ್ಟ 3 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದವರ ಹೊಟ್ಟೆಗೂ ಸರ್ಕಾರ ಕಲ್ಲು ಹಾಕಿತ್ತು. ವಲಸೆ ಬಂದು ಇಲ್ಲಿ ವಾಸಿಸುತ್ತಿರುವ ಜನರ ಸ್ಥಿತಿಯನ್ನಂತೂ ಹೇಳಲು ಅಸಾಧ್ಯವಾಗಿದೆ ಎಂದು ಸಮೀಕ್ಷೆ ಹೇಳಿದೆ.

ಇತ್ತೀಚಿನ ಸುದ್ದಿ