ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಪದಕ ವಿಜೇತ ಗುರುರಾಜ ಪೂಜಾರಿಗೆ ಗೌರವ
ಉಡುಪಿ : ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಂ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ವೇಯ್ಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು, ಜಿಲ್ಲೆಗೆ ಆಗಮಿಸಿದ ಕುಂದಾಪುರದ ಗುರುರಾಜ ಪೂಜಾರಿ ಅವರನ್ನು ಇಂದು ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಮಹಾತ್ಮಗಾಂಧೀ ಮೈದಾನದ ಬಳಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಪೌರಾಯುಕ್ತ ಡಾ.ಉದಯ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಗುರುರಾಜ ಪೂಜಾರಿ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅವಧಿಯಲ್ಲಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಪದಕ ಪಡೆಯುವ ಮೂಲಕ ಗುರುರಾಜ ಪೂಜಾರಿ ಅವರು ಉಡುಪಿ ಜಿಲ್ಲೆಯ ಸಂಭ್ರಮವನ್ನು ಹೆಚ್ಚಿಸಿದ್ದು, ದೇಶದಲ್ಲಿ ಜಿಲ್ಲೆಯ ಹೆಸರನ್ನು ಪ್ರಖ್ಯಾತಗೊಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಹ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿರುವ ಇವರ ಸಾಧನೆ ಜಿಲ್ಲೆಯ ಯುವಜನತೆಗೆ ಹಾಗೂ ಕ್ರೀಡಾಪಟುಗಳಿಗೆ ಸದಾ ಸ್ಪೂರ್ತಿಯಾಗಿದೆ . ಜಿಲ್ಲೆಯಲ್ಲಿ ಉತ್ತಮ ಕ್ರೀಡಾಂಗಣ ಹಾಗೂ ಕ್ರೀಡಾ ಸೌಲಭ್ಯಗಳಿದ್ದು ಕ್ರೀಡಾಪಟುಗಳು ಈ ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದರು.
ಜಿಲ್ಲಾಡಳಿತದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗುರುರಾಜ ಪೂಜಾರಿ, ಈ ಬಾರಿಯ ಕಾಮನ್ ವೆಲ್ಸ್ ಗೇಮ್ಸ್ ನಲ್ಲಿ ರಜತ ಪಡೆಯುವ ಗುರಿಯಿಂದ 4 ವರ್ಷಗಳಿಂದ ಕಠಿಣ ಪರಿಶ್ರಮ ಪಟ್ಟಿದ್ದು, ಬರ್ಮಿಂಗ್ ಹ್ಯಾಂ ಗೆ ತೆರಳಿದ ನಂತರ ಅನಾರೋಗ್ಯ ಸಮಸ್ಯೆ ತಲೆದೋರಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವುದೇ ಅನುಮಾನವಾಗಿತ್ತು ಆದರೆ ಕೋಚ್ ನ ಮಾರ್ಗದರ್ಶನ , ಆತ್ಮ ವಿಶ್ವಾಸ ಮತ್ತು ಎಲ್ಲರ ಹಾರೈಕೆಯಿಂದ ಗುಣಮುಖನಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ, ತೀವ್ರ ಪೈಪೋಟಿಯ ನಡುವೆ ಕಂಚಿನ ಪದಕ ಪಡೆದು, ವೇಯ್ಟ್ ಲಿಪ್ಟಿಂಗ್ ನ 61 ಕೆಜಿ ವಿಭಾಗದಲ್ಲಿ ದೇಶಕ್ಕೆ ಇದೇ ಮೊದಲ ಬಾರಿಗೆ ಪದಕ ಪಡೆದ ಇತಿಹಾಸ ಸೃಷ್ಠಿಸಲು ಸಾಧ್ಯವಾಯಿತು. ನನ್ನ ಈ ಸಾಧನೆಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಕಳೆದ ಬಾರಿಯ ಕಾಮನ್ ವೆಲ್ಸ್ ಗೇಮ್ಸ್ ನಲ್ಲಿ ಪದಕ ಪಡೆದಾಗಲೂ ಸಹ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನತೆ ನೀಡಿದ ಗೌರವವನ್ನು ನೆನಪು ಮಾಡಿಕೊಂಡರು. ಕ್ರೀಡಾಪಟುಗಳು ನಿರ್ದಿಷ್ಟ ಗುರಿಯೊಂದಿಗೆ ಕಠಿಣ ಪರಿಶ್ರಮ ಪಟ್ಟರೆ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಗುರುರಾಜ ಪೂಜಾರಿ ಅವರ ತಂದೆ, ಪತ್ನಿ , ಅಜ್ಜರಕಾಡು ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳು, ನೇಷನ್ ಫಸ್ಟ್ ತಂಡದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka




























