ತೀವ್ರ ಆರ್ಥಿಕ ಮುಗ್ಗಟ್ಟು | ಒಂದೇ ಕುಟುಂಬದ ಐವರು ನೇಣುಬಿಗಿದು ಆತ್ಮಹತ್ಯೆ
02/11/2020
ಗುವಾಹತಿ: ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾದ ಘಟನೆ ಅಸೋಂನ ಕೊಕ್ರಜಾರ್ ಜಿಲ್ಲೆಯ ಗೊಸ್ಸೈಗಾಂವ್ ನ ತುಳಸಿಬಿಲ್ ಪ್ರದೇಶದಲ್ಲಿ ನಡೆದಿದೆ.
ನಿರ್ಮಲ್ ಪಾಲ್, ಅವರ ಪತ್ನಿ ಮತ್ತು ಮೂವರು ಪುತ್ರಿಯರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎಲ್ಪಿಜಿ ವಿತರಕ ಏಜೆನ್ಸಿ ಹೊಂದಿದ್ದ ನಿರ್ಮಲ್ ಪಾಲ್ ಅವರು ತೀವ್ರ ಹಣಕಾಸಿನ ಮುಗ್ಗಟ್ಟು ಎದುರಿಸಿದ್ದರು ಎಂದು ಹೇಳಲಾಗಿದೆ.
ನಿರ್ಮಲ್ ಪಾಲ್ ಅವರ 16 ಮತ್ತು 17 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಬ್ಬರು ಇನ್ನೂ ಕಾಲೇಜು ವ್ಯಾಸಂಗ ಮಾಡುತ್ತಿದ್ದರೆ ಹಿರಿಯ ಪುತ್ರಿಗೆ 25 ವರ್ಷವಾಗಿತ್ತು. ಆಕೆ ಪದವಿ ಮುಗಿಸಿ ಸ್ಥಳೀಯ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಳು ಎಂದು ವರದಿಯಾಗಿದೆ.
ಸಾಲಮರುಪಾವತಿ ಸಾಧ್ಯವಾಗದೇ ಕುಟುಂಬವು ಆತ್ಮಹತ್ಯೆಗೆ ಶರಣಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


























