ಇಯರ್ ಫೋನ್ ಹಾಕಿಕೊಂಡು ಹಳಿ ಮೇಲೆ ನಡೆಯುತ್ತಿದ್ದ ವೇಳೆ ರೈಲು ಡಿಕ್ಕಿ: ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಬೆಂಗಳೂರು: ಕಿವಿಗೆ ಇಯರ್ ಫೋನ್ ಹಾಕಿಕೊಂಡು ಹಳಿಗಳ ಮೇಲೆ ನಡೆಯುತ್ತಿದ್ದ ವಿದ್ಯಾರ್ಥಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಲಹಂಕದ ಬಳಿ ನಡೆದಿದೆ.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬಿ ಟೆಕ್ ವಿದ್ಯಾರ್ಥಿ ಶಿವ ಸೂರ್ಯ(19) ಮೃತ ವಿದ್ಯಾರ್ಥಿಯಾಗಿದ್ದಾನೆ.
ಇಯರ್ಫೋನ್ಗಳನ್ನು ಹಾಕಿಕೊಂಡು ರೈಲ್ವೇ ಹಳಿಗಳ ಮೇಲೆ ನಡೆದುಕೊಂಡುಹೋಗುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ ಎಂದು ಅಂದಾಜಿಸಲಾಗಿದೆ. ಶನಿವಾರ ಸಂಜೆ 7.45ರ ಸುಮಾರಿಗೆ ಯಲಹಂಕದ ಕಾಲೇಜು ಬಳಿ ಈ ಘಟನೆ ನಡೆದಿದೆ.
ಸಾವಿಗೂ ಕೆಲವು ಕ್ಷಣ ಮುನ್ನ ಹಾಸ್ಟೆಲ್ ಗೆ ಕರೆ ಮಾಡಿದ್ದ ಸೂರ್ಯ ಕೆಲವೇ ಕ್ಷಣಗಳಲ್ಲಿ ಹಾಸ್ಟೆಲ್ ಗೆ ಬರುವುದಾಗಿ ಹೇಳಿದ್ದ. ಆದರೆ ಹಳಿಯಲ್ಲಿ ನಡೆಯುತ್ತಾ, ಮ್ಯೂಸಿಕ್ ಕೇಳುತ್ತಾ ಅಥವಾ ಫೋನ್ ನಲ್ಲಿ ಮಾತನಾಡುತ್ತಾ ಬರುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.