ತಡರಾತ್ರಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆ: ನಾಲ್ವರು ಅರೆಸ್ಟ್

ಪುತ್ತೂರು: ತಾಲೂಕಿನ ಮುಕ್ರಂಪಾಡಿ ಜಂಕ್ಷನ್ ನಲ್ಲಿ ತಡರಾತ್ರಿ ಅನುಮಾನಸ್ಪದವಾಗಿ ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆಯಾಗಿದ್ದು, ಕಾರಿನಲ್ಲಿದ್ದ ನಾಲ್ವರನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರಿನಲ್ಲಿದ್ದ ಬಂಟ್ವಾಳದ ಗೋಳ್ತಮಜಲು ಗ್ರಾಮ ನಿವಾಸಿ ಕಿಶೋರ್ (36), ಪುತ್ತೂರಿನ ಕಬಕ ಗ್ರಾಮ ನಿವಾಸಿ ಮನೋಜ್ (23), ಕಬಕ ಗ್ರಾಮ ನಿವಾಸಿ ಆಶಿಕ್ (28) ಮತ್ತು ಪುತ್ತೂರಿನ ಪಡ್ನೂರು ಗ್ರಾಮ ನಿವಾಸಿ ಸನತ್ ಕುಮಾರ್ (24) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು ನಗರ ಪೊಲೀಸ್ ನಿರೀಕ್ಷಕ ಸತೀಶ್ ಜಿ.ಜೆ, ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳೊಂದಿಗೆ ಪರಿಶೀಲನೆಯಲ್ಲಿ ತೊಡಗಿದ್ದ ವೇಳೆ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ಕಾರು ನಿಂತಿತ್ತು. ಕಾರನ್ನು ಪರಿಶೀಲಿಸಿದಾಗ, ಕಾರಿನಲ್ಲಿ ಒಂದು ತಲವಾರು ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ಹಾಗೂ ಕಾನೂನುಕ್ರಮಕ್ಕಾಗಿ ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಫೆ.20ರಂದು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.