ಬಿಗ್ ಬಾಸ್ ಮನೆಯ ಹೆಣ್ಣು ಮಕ್ಕಳನ್ನು ಟೈಟ್ ಆಗಿ ತಬ್ಬಿಕೊಳ್ಳುತ್ತಿರುವ ಪ್ರಶಾಂತ್ ಸಂಬರಗಿಗೆ ಸುದೀಪ್ ಖಡಕ್ ವಾರ್ನಿಂಗ್ - Mahanayaka
8:05 AM Saturday 24 - January 2026

ಬಿಗ್ ಬಾಸ್ ಮನೆಯ ಹೆಣ್ಣು ಮಕ್ಕಳನ್ನು ಟೈಟ್ ಆಗಿ ತಬ್ಬಿಕೊಳ್ಳುತ್ತಿರುವ ಪ್ರಶಾಂತ್ ಸಂಬರಗಿಗೆ ಸುದೀಪ್ ಖಡಕ್ ವಾರ್ನಿಂಗ್

14/03/2021

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆಯಲ್ಲಿದ್ದ ಪ್ರಶಾಂತ್ ಸಂಬರಗಿ ಕನ್ನಡದ ಬಿಗ್ ಬಾಸ್ ಮನೆ ಪ್ರವೇಶಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ, ಅವರು ಬಿಗ್ ಬಾಸ್ ಮನೆಯ ಹೆಣ್ಣು ಮಕ್ಕಳ ಜೊತೆಗೆ ತೋರುತ್ತಿರುವ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಪ್ರಶಾಂತ್ ಗೆ ಕಿಚ್ಚ ಸುದೀಪ್ ಕೂಡ ಖಡಕ್ ವಾರ್ನಿಂಗ್ ನೀಡಿದ್ದಾರೆ.

ವೈರಸ್ ಟಾಸ್ಕ್ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಶಾಂತ್ ಸಂಬರಗಿ ಹೆಣ್ಣುಮಕ್ಕಳನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಿದ್ದರು.  ಈ ವ್ಯಕ್ತಿ ಯಾಕಪ್ಪಾ ಹೀಗೆ ಹೆಣ್ಣು ಮಕ್ಕಳನ್ನು ತಬ್ಬಿಕೊಳ್ಳುತ್ತಿದ್ದಾನೆ ಎಂದು ಪ್ರೇಕ್ಷಕರು ಕೂಡ ಮುಜುಗರ ಅನುಭವಿಸಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿವೆ. ಪ್ರಶಾಂತ್ ಸಂಬರಗಿಯ ಈ ವರ್ತನೆ ಸಾರ್ವಜನಿಕ ಜೀವನದಲ್ಲಿ ಬೇರೆಯೇ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

ಇನ್ನೂ ವೀಕೆಂಡ್ ನಲ್ಲಿ ಸ್ಪರ್ಧಿಗಳ ಜೊತೆಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಕಿಚ್ಚ ಸುದೀಪ್ ಪ್ರಶಾಂತ್ ಸಂಬರಗಿಗೆ ವಾರ್ನಿಂಗ್ ನೀಡಿದ್ದಾರೆ. ಪ್ರಶಾಂತ್ ಅವರೇ ನೀವು ಎಲ್ಲರನ್ನೂ ತಬ್ಬಿಕೊಳ್ಳುತ್ತೀರಿ. ಕೆಲವರನ್ನು ತುಂಬಾನೇ ತಬ್ಬಿಕೊಳ್ಳುತ್ತೀರಿ. ನೀವು ತಬ್ಬಿಕೊಳ್ಳುತ್ತಿರುವುದು ಸಮಸ್ಯೆ ಅಲ್ಲ,  ನೀವು ತಬ್ಬಿಕೊಂಡಾಗ ಮಾತನಾಡುತ್ತೀರಲ್ಲ, ಅದು ಸಮಸ್ಯೆ. ನೀವು ತಬ್ಬಿಕೊಂಡಾಗ ಮೈಕ್ ಒತ್ತಿಕೊಂಡಿರುತ್ತದೆ. ಹಾಗಾಗಿ ನೀವು ಮಾತನಾಡಿರುವುದು ಬೇರೆ ರೀತಿಯಾಗಿ ಕೇಳಿಸುತ್ತಿದೆ ಎಂದು ಹೇಳಿದ್ದಾರೆ.

ನೀವು ಒಬ್ಬೊಬ್ಬರನ್ನು ದೀರ್ಘ ಕಾಲ ತಬ್ಬಿಕೊಳ್ಳುತ್ತೀರಿ. ಅದು ತಪ್ಪು ಎಂದು ನಾನು ಹೇಳುವುದಿಲ್ಲ. ತಬ್ಬಿಸಿಕೊಳ್ಳುವವರಿಗೆ ಅಭ್ಯಂತರ ಇಲ್ಲದಿದ್ದರೆ, ನಮ್ಮದೇನು ಅಭ್ಯಂತರ? ಎರಡು ನಿಮಿಷಕ್ಕಿಂತ ಹೆಚ್ಚು ಕಾಲ ತಬ್ಬಿಕೊಳ್ಳುವಂತಿಲ್ಲ ಎಂಬ ನಿಯಮ ಬಿಗ್ ಬಾಸ್ ನಲ್ಲಿಲ್ಲ, ಆದರೆ ಬಿಗ್ ಬಾಸ್ ಇಂತಹದ್ದೊಂದು ನಿಯಮ ತರುವಂತೆ ಮಾಡಬೇಡಿ ಎಂದು ಸುದೀಪ್ ಹೇಳಿದರು.

ಇತ್ತೀಚಿನ ಸುದ್ದಿ