ಸಿಎಂ ಡಿ.ಕೆ.ಶಿವಕುಮಾರ್, ಸಚಿವರ ಪ್ರಮಾಣವಚನ ಪ್ರಶ್ನಿಸಿದ್ದ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್ - Mahanayaka

ಸಿಎಂ ಡಿ.ಕೆ.ಶಿವಕುಮಾರ್, ಸಚಿವರ ಪ್ರಮಾಣವಚನ ಪ್ರಶ್ನಿಸಿದ್ದ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್

CM DK oath.jpg
17/06/2026

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ 13 ಮಂದಿ ಸಚಿವರ ಪ್ರಮಾಣ ವಚನ ಸ್ವೀಕಾರ ಹಾಗೂ ಮಂತ್ರಿಮಂಡಲದ ರಚನೆ ಸಂವಿಧಾನಬಾಹಿರವೆಂದು ಘೋಷಿಸುವಂತೆ ಕೋರಿ ಹುಬ್ಬಳ್ಳಿಯ ನಿವಾಸಿ ಮಂಗಳಪ್ಪ ತಿಪ್ಪಣ್ಣ ಹುಲಿಕೇರಿ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠವು, ಇದೊಂದು ಊಹೆ ಮತ್ತು ಗ್ರಹಿಕೆಗಳ ಆಧಾರದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಸಲ್ಲಿಸಲಾಗಿರುವ ಕ್ಷುಲ್ಲಕ ಅರ್ಜಿಯಾಗಿದೆ. ಇಂತಹ ಅರ್ಜಿಗಳ ಮೂಲಕ ನ್ಯಾಯಾಲಯದ ಸಮಯ ಹಾಳು ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಅರ್ಜಿಯನ್ನು ವಜಾಗೊಳಿಸಿದೆ.

ಅಲ್ಲದೆ, ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಎರಡು ವಾರಗಳಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.

ಜೂನ್ 3ರಂದು 14 ಮಂದಿಯ ಮಂತ್ರಿಮಂಡಲ ರಚನೆಯಾಗಿತ್ತು. ಕರ್ನಾಟಕ ವಿಧಾನಸಭೆಯ ಸಂಖ್ಯಾಬಲ 224 ಆಗಿದ್ದು, ಸಂವಿಧಾನದ ಪರಿಚ್ಛೇದ 164 (1ಎ) ಪ್ರಕಾರ ಸಚಿವ ಸಂಪುಟದ ಗಾತ್ರ ಶೇಕಡಾ 12ರಿಂದ 15 ರಷ್ಟಿರಬೇಕು. ಅಂದರೆ ಕನಿಷ್ಠ 24 ಅಥವಾ ಗರಿಷ್ಠ 34 ಸಚಿವರು ಇರಬೇಕು. ಆದರೆ ಕೇವಲ 14 ಮಂದಿಯ ಮಂತ್ರಿಮಂಡಲ ರಚಿಸಿರುವುದು ಸಂವಿಧಾನಬಾಹಿರ ಎಂದು ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ