ಬಿಎಂಎಸ್ ಟ್ರಸ್ಟ್ ಹಗರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇರ ಶಾಮೀಲು! - Mahanayaka
8:39 PM Wednesday 27 - August 2025

ಬಿಎಂಎಸ್ ಟ್ರಸ್ಟ್ ಹಗರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇರ ಶಾಮೀಲು!

ashwath narayan
07/02/2023

  • ಡಾ.ಸಿ.ಎನ್. ಅಶ್ವತ್ಥನಾರಾಯಣ, ದಯಾನಂದ ಪೈ ಜತೆಗಿರುವ ಫೋಟೋ ಬಿಡುಗಡೆ ಮಾಡಿದ ಮಾಜಿ ಸಿಎಂ

Provided by

ಬೆಂಗಳೂರು: ಬಿಎಂಎಸ್ ಟ್ರಸ್ಟ್ ಹಗರಣದ ವಿಚಾರದಲ್ಲಿ ತಾವು ಕ್ಲೀನ್ ಎಂದು ವಿಧಾನಸಭೆಯಲ್ಲಿ ಕೊಚ್ಚಿಕೊಂಡ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಾರ್ವಜನಿಕ ಸ್ವತ್ತಾದ ಆ ಟ್ರಸ್ಟ್ ಅನ್ನು ಹೊಡೆದುಕೊಂಡ ವ್ಯಕ್ತಿಯ ಜತೆ ನೇರ ಶಾಮೀಲಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಎಂಎಸ್ ಟ್ರಸ್ಟ್ ಅನ್ನು ಹೈಜಾಕ್ ಮಾಡುತ್ತಿರುವ ಉದ್ಯಮ ದಯಾನಂದ ಪೈ ಹಾಗೂ ಸಚಿವ ಅಶ್ವತ್ಥನಾರಾಯಣ ಇಬ್ಬರೂ ಕುಟುಂಬ ಸಮೇತ ನಿಕಟವಾಗಿ ಆಪ್ತ ಮಾತುಕತೆಯಲ್ಲಿ ತೊಡಗಿರುವ ಫೋಟೋ ಒಂದನ್ನು ಬಿಡುಗಡೆ ಮಾಡಿದರು.

ಬಿಎಂಎಸ್ ಟ್ರಸ್ಟ್ ಸರಕಾರದ ಸ್ವತ್ತು. ಅದು ಖಾಸಗಿಯವರ ಪಾಲಾಗಲು ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಸರಕಾರ ಬಂದರೆ ಆ ಟ್ರಸ್ಟ್ ಅನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಬಿಎಂಎಸ್ ಟ್ರಸ್ಟ್ ಅನ್ನು ಖಾಸಗಿ ಶಕ್ತಿಗಳ ಪಾಲಾಗುವಲ್ಲಿ ಸಚಿವ ಅಶ್ವತ್ಥನಾರಾಯಣ ಪಾತ್ರ ದೊಡ್ಡದು. ಅದಕ್ಕೆ ಈ ಫೋಟೋ ಕೂಡ ಒಂದು ಸಾಕ್ಷಿ. ಈಗಾಗಲೇ ನಾನು ಸದನದಲ್ಲಿ ಅನೇಕ ಮಹತ್ವದ ಸಾಕ್ಷ್ಯಗಳನ್ನು ಮಂಡಿಸಿದ್ದೇನೆ. ಆದರೆ, ಸರಕಾರ ತನಿಖೆಗೆ ಒಪ್ಪಲಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು ಮಾಜಿ ಮುಖ್ಯಮಂತ್ರಿಗಳು.

ಸಚಿವ ಅಶ್ವತ್ಥನಾರಾಯಣ ಅವರೇನೋ ಹೇಳಿದ್ದಾರೆ. ಬಿಎಂಎಸ್ ಟ್ರಸ್ಟ್ ನದು ನಾನೇನೂ ತಿಂದಿಲ್ಲ ಎಂದು ಕಲಾಪದಲ್ಲಿ ಸುಳ್ಳು ಹೇಳಿದ್ದಾರೆ. ಆದರೆ, ಟ್ರಸ್ಟ್ ಲಪಟಾಯಿಸಲು ಹೊರಟಿರುವ ವ್ಯಕ್ತಿಯ ಜತೆ ಅವರು ಹೊಂದಿರುವ ಸಂಬಂಧ ಎಂತಹದು ಎನ್ನುವುದಕ್ಕೆ ನಾನು ಬಿಡುಗಡೆ ಮಾಡಿರುವ ಫೋಟೋ ಪ್ರಮುಖ ದಾಖಲೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ವಿಧಾನ ಮಂಡಲ ಅಧಿವೇಶನದಲ್ಲಿ ನಾನು ಈ ಟ್ರಸ್ಟಿನ  ದಾಖಲೆಗಳನ್ನು ಇಟ್ಟರೆ ಒಬ್ಬರೂ ಮಾತನಾಡಲಿಲ್ಲ. ಇದನ್ನು ನಾನು ಇಲ್ಲಿಗೆ ಬಿಡೋದಿಲ್ಲ. ಸರ್ಕಾರ ಬರಲಿ ಅಂತ ಕಾಯ್ತಾ ಇದ್ದೀನಿ. ಇಂದು ನಮ್ಮ ಕುಟುಂಬದ ಬಗ್ಗೆ ಮಾತಾಡೋದಲ್ಲ. ಯಾವನಿಗೆ ಲೂಟಿ ಹೊಟೆಯಲು ಈ ಸಂಸ್ಥೆ ಕೊಟ್ಟಿದ್ದಾರೆ ಇವರು. ನಾಚಿಕೆ ಆಗಬೇಕು ಇವರಿಗೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ ಈ ಸಂದರ್ಭದಲ್ಲಿ ಇದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ