ಹಿಮಾಚಲಪ್ರದೇಶದಲ್ಲಿ ವರುಣನ ಆರ್ಭಟ: ಧರೆಗುರುಳಿದ ಕಸಾಯಿಖಾನೆ, ಮನೆಗಳು

ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ಮಳೆ ಹಾನಿ ಮುಂದುವರೆದಿದೆ. ಈ ಮಧ್ಯೆ ಉಂಟಾದ ಭೂಕುಸಿತದಲ್ಲಿ ಮೂರು ಮಹಡಿಯ ಕಸಾಯಿಖಾನೆ ಸಹಿತ ಹಲವಾರು ಮನೆಗಳು ಕುಸಿದುಬಿದ್ದಿರುವ ದುರಂತ ಘಟನೆ ನಡೆದಿದೆ.
ಕೃಷ್ಣನಗರದ ಖಾಲಿನಿ-ಟೂಟಿಖಂಡಿ ಬೈಪಾಸ್ ಸಮೀಪದ ಲಾಲ್ ಪಾಣಿ ಎಂಬಲ್ಲಿ ಈ ದುರಂತ ನಡೆದಿದೆ. ಈ ಕುರಿತು ಶಿಮ್ಲಾದ ಜಿಲ್ಲಾಧಿಕಾರಿ ಆದಿತ್ಯ ನೇಗಿ ನೀಡಿರುವ ಮಾಹಿತಿ ಪ್ರಕಾರ, ಈ ಪ್ರದೇಶದಲ್ಲಿ ಬೆಟ್ಟವೊಂದು ಕುಸಿದ ಪರಿಣಾಮ ಐದರಿಂದ ಏಳು ಮನೆಗಳು ಕುಸಿದಿವೆ. ಆದರೆ ಈ ದುರ್ಘಟನೆಯಲ್ಲಿ ಜನರು ಸಿಲುಕಿಕೊಂಡಿರುವ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ ಎಂದಿದ್ದಾರೆ.
ಈ ಗುಡ್ಡ ಕುಸಿತದ ಪರಿಣಾಮ ಅಕ್ಕ ಪಕ್ಕದಲ್ಲಿರುವ ಮನೆಗಳೂ ಹಾನಿಗೊಳಗಾಗುವ ಭೀತಿ ಎದುರಾಗಿದೆ. ಕಳೆದ ಮೂರು ದಿನಗಳಿಂದ ಈ ಭಾಗಲದಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಮರಗಳು ಉರುಳುವುದು ಹಾಗೂ ಗುಡ್ಡ ಕುಸಿತದಂತಹ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಶಿಮ್ಲಾ ಪಟ್ಟಣದ ಸಮ್ಮರ್ ಹಿಲ್ ಪ್ರದೇಶದಲ್ಲಿನ ಶಿವ ಮಂದಿರದಲ್ಲಿ ಗುಡ್ಡಕುಸಿತ ಉಂಟಾಗಿ ಒಂಭತ್ತು ಜನ ಸಾವಿಗೀಡಾಗಿದ್ದರು.