ಮರಾಠಿ ಮಾತನಾಡುವುದಿಲ್ಲ ಎಂದ ಹಿಂದಿ ಭಾಷಿಗನಿಗೆ ಮಹಾರಾಷ್ಟ್ರದಲ್ಲಿ ಹಲ್ಲೆ!

ಪಾಲ್ಘರ್: ಹಿಂದಿ ಮಾತನಾಡುತ್ತಿದ್ದ ವಲಸೆ ಆಟೋ ಚಾಲಕನಿಗೆ ಮಹಾರಾಷ್ಟ್ರದಲ್ಲಿ “ಮರಾಠಿ ಮಾತನಾಡು” ಎಂದು ಥಳಿಸಿರುವ ಘಟನೆ ನಡೆದಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮತ್ತು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಬೆಂಬಲಿಗರು ಹಿಂದಿ ಭಾಷಿಗ ಆಟೋ ಚಾಲಕನಿಗೆ ಸಾರ್ವಜನಿಕ ಪ್ರದೇಶದಲ್ಲೇ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಕೆಲವು ದಿನಗಳ ಹಿಂದೆ ಆಟೋ ಚಾಲಕ ವಿರಾರ್ ರೈಲು ನಿಲ್ದಾಣದ ಬಳಿಯಲ್ಲಿ ಪ್ರಯಾಣಿಕರೊಬ್ಬರ ಜೊತೆಗೆ ವಾಗ್ವಾದ ನಡೆಸಿದ್ದ. ಪ್ರಯಾಣಿಕ ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದಾಗ, ಆಟೋ ಚಾಲಕ ಪದೇ ಪದೇ ನಾನು ಹಿಂದಿಯಲ್ಲಿ ಮಾತನಾಡುತ್ತೇನೆ. ಹಿಂದಿ ಅಲ್ಲದಿದ್ದರೆ, ಬೋಜ್ ಪುರಿಯಲ್ಲಿ ಮಾತನಾಡುತ್ತೇನೆ ಅದೇ ಉತ್ತಮ ಎಂಬಂತೆ ಆಟೋ ಚಾಲಕ ಮಾತನಾಡಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ವಿರಾರ್ ರೈಲ್ವೆ ನಿಲ್ದಾಣದ ಬಳಿ ಶಿವಸೇನೆ (ಯುಬಿಟಿ) ಮತ್ತು ಎಂಎನ್ ಎಸ್ ಬೆಂಬಲಿಗರ ಗುಂಪು ಆಟೋ ಚಾಲಕನನ್ನು ಅಡ್ಡಗಟ್ಟಿ, ಮರಾಠಿ ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ. ಈ ಗುಂಪಿನಲ್ಲಿ ಮಹಿಳಾ ಸದಸ್ಯೆಯರು ಕೂಡ ಇದ್ದರು. ಅವರು ಕೂಡ ಚಾಲಕನಿಗೆ ಹಲ್ಲೆ ನಡೆಸುತ್ತಿರುವುದು ಕಂಡು ಬಂತು.
ಹಲ್ಲೆಯ ನಂತರ ಆಟೋ ಚಾಲಕ ಮಹಾರಾಷ್ಟ್ರಕ್ಕೆ ಮತ್ತು ಮರಾಠಿ ಭಾಷಿಗರ ಜೊತೆಗೆ ಕ್ಷಮೆಯಾಚಿಸುವಂತೆ ಒತ್ತಡ ಹಾಕಲಾಯಿತು. ಮರಾಠಿ ಭಾಷೆ, ಸಂಸ್ಕೃತಿಗೆ ಅವಮಾನಿಸಿದರೆ, ನಾವು ಶಿವಸೇನೆಯ ಶೈಲಿಯಲ್ಲೇ ಪ್ರತಿಕ್ರಿಯಿಸುತ್ತೇವೆ ಎಂದು ದಾಳಿಕೋರರು ಎಚ್ಚರಿಕೆ ನೀಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: