ಅಮ್ಮನನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದ ಮಗಳು: “ಅಪ್ಪನಿಗೆ ಹೇಳುತ್ತೇನೆ” ಎಂದಿದ್ದಕ್ಕೆ ನಡೆಯಿತು ಘೋರ ಕೃತ್ಯ!

ಹಥ್ರಾಸ್: “ಅಪ್ಪನಿಗೆ ಹೇಳುತ್ತೇನೆ” ಎಂದ ಒಂದೇ ಮಾತಿಗೆ ತನ್ನ ಅಪ್ರಾಪ್ತ ಪ್ರಿಯಕರನ ಜೊತೆಗೆ ಸೇರಿ ಏನೂ ಅರಿಯದ ಮುಗ್ಧ ಮಗುವನ್ನು ತಾಯಿಯೇ ಬರ್ಬರವಾಗಿ ಹತ್ಯೆ ಮಾಡಿ ಬಾವಿಗೆ ಎಸೆದಿರುವ ಘಟನೆಯೊಂದು ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ ನಡೆದಿದೆ.
ಮಹಿಳೆಗೆ ಮದುವೆಯಾಗಿ 6 ವರ್ಷ ವಯಸ್ಸಿನ ಮಗಳಿದ್ದರೂ, 17 ವರ್ಷದ ಅಪ್ರಾಪ್ತ ಯುವಕನ ಜೊತೆಗೆ ಅಕ್ರಮ ಸಂಬಂಧ ಆರಂಭವಾಗಿತ್ತು. ಆತನನ್ನ ಕದ್ದುಮುಚ್ಚಿ ಭೇಟಿಯಾಗುತ್ತಿದ್ದ ಈಕೆ ಗಂಡನಿಗೆ ಮೋಸ ಮಾಡಲು ಆರಂಭಿಸಿದ್ದಳು. ಅತ್ತ ಪ್ರಿಯಕರನ ಜೊತೆಗೆ ಕಾಲ ಕಳೆಯಲು ಕಾಯುತ್ತಿದ್ದ ಮಹಿಳೆಗೆ ಆ ದಿನ ಅಂತಹ ದಿನವೂ, ಅವಕಾಶವೂ ಸಿಕ್ಕಿತ್ತು. ಗಂಡ ತನ್ನ ತಾಯಿಯ ಜೊತೆಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಸಮಯದಲ್ಲಿ ಮಹಿಳೆ ತನ್ನ ಅಪ್ರಾಪ್ತ ವಯಸ್ಕ ಪ್ರಿಯಕರನನ್ನು ಮನೆಗೆ ಕರೆದಿದ್ದಳು.
ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗದಂತೆ ಮಗಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು, ಸಂಜೆಯಾದ ನಂತರ ಕರೆದುಕೊಂಡು ಹೋಗ್ತೇನೆ ಎಂದಿದ್ದಳು. ಬಳಿಕ ತನ್ನ ಮನೆಗೆ ಬಂದು ಪ್ರಿಯಕರನ ಜೊತೆಗೆ ಕಾಲ ಕಳೆಯುತ್ತಿದ್ದಳು.
ಅತ್ತ ಸಂಬಂಧಿಕರ ಮನೆಯಲ್ಲಿ ಆಟವಾಡಿ ಸಾಕಾಗಿದ್ದ 6 ವರ್ಷದ ಬಾಲಕಿ ನೇರವಾಗಿ ತನ್ನ ಮನೆಯತ್ತ ಬಂದಿದ್ದಾಳೆ. ಮನೆಗೆ ಬಂದ ಕೂಡಲೇ ತನ್ನ ತಾಯಿಯ ಜೊತೆಗೆ ಆಕೆಯ ಪ್ರಿಯಕರನನ್ನ ನೋಡಬಾರದು ಸ್ಥಿತಿಯಲ್ಲಿ ನೋಡಿ ಆಘಾತಕ್ಕೊಳಗಾಗಿದ್ದು, “ತಂದೆ ಬರಲಿ ಹೇಳುತ್ತೇನೆ” ಎಂದಿದ್ದಾಳೆ. ಈ ವೇಳೆ ಆಕೆಯ ತಾಯಿ ಮಗಳಿಗೆ ಗದರಿ, ಜೋರು ಮಾಡಿ ಬಾಯಿ ಮುಚ್ಚಿಸಲು ನೋಡಿದ್ದಾಳೆ. ಆದರೆ ಬಾಲಕಿಯು ತಂದೆಗೆ ಹೇಳದೇ ಬಿಡುವುದಿಲ್ಲ ಎಂದು ದೃಢವಾಗಿ ನಿಂತಿದ್ದಾಳೆ. ಇದರಿಂದ ತಾನು ಸಿಕ್ಕಿ ಬೀಳುತ್ತೇನೆ ಎನ್ನುವುದು ದೃಢವಾಗುತ್ತಿದ್ದಂತೆಯೇ ಮಗಳೂ ಎಂದೂ ನೋಡದೇ ಪ್ರಿಯಕರನ ಜೊತೆಗೆ ಸೇರಿ ಆಕೆಯನ್ನು ಹತ್ಯೆ ಮಾಡಿ, ಬಾವಿಗೆಸೆದಿದ್ದಾಳೆ. ನಂತರ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕಥೆ ಕಟ್ಟಿದ್ದಾಳೆ. ಮನೆಗೆ ಬಂದ ಪತಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಹುಡುಕಾಟ ನಡೆಸಿದ ವೇಳೆ ಬಾವಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.
ಪೋಸ್ಟ್ ಮಾರ್ಟಂ ವರದಿಯಲ್ಲಿ ಕೊಲೆ ಎನ್ನುವುದು ಸಾಬೀತಾಗಿದೆ. ಮಹಿಳೆಯನ್ನು ಪೊಲೀಸರು ವಿಚಾರಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾಳೆ. ಸದ್ಯ ಮಹಿಳೆಯನ್ನು ಬಂಧಿಸಿರುವ ಪೊಲೀಸರು, ಅಪ್ರಾಪ್ತ ವಯಸ್ಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ತೀವ್ರಗೊಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD