ತಂದೆ—ತಾಯಿ—ಸಹೋದರಿಯನ್ನು ಕೊಂದು ಹೂತು ಹಾಕಿ, ಮಿಸ್ಸಿಂಗ್ ಕೇಸ್ ಕೊಟ್ಟ ಪಾಪಿ ಮಗ!
ಕೊಟ್ಟೂರು: ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಹೆತ್ತ ತಂದೆ–ತಾಯಿ ಹಾಗೂ ಸ್ವಂತ ತಂಗಿಯನ್ನೇ ಮಗನೊಬ್ಬ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ಮೃತದೇಹಗಳನ್ನು ಮನೆಯೊಳಗೆ ಹೂತುಹಾಕಿ ನಾಟಕವಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಅಕ್ಷಯ್ ಕುಮಾರ್ ಬಂಧಿತ ಆರೋಪಿ. ಈತ ಜನವರಿ 27ರಂದು ತನ್ನ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮಿ ಮತ್ತು ತಂಗಿ ಅಮೃತಾಳನ್ನು ಹತ್ಯೆ ಮಾಡಿದ್ದಾನೆ. ಹತ್ಯೆಯ ನಂತರ ಸಾಕ್ಷ್ಯ ನಾಶಪಡಿಸಲು ಮನೆಯೊಳಗೇ ಮೃತದೇಹಗಳನ್ನು ಹೂತುಹಾಕಿ ಯಾರಿಗೂ ತಿಳಿಯದಂತೆ ಬೆಂಗಳೂರಿಗೆ ಪರಾರಿಯಾಗಿದ್ದ.
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಆರೋಪಿ: ಬೆಂಗಳೂರಿಗೆ ಬಂದ ಅಕ್ಷಯ್, ತಿಲಕ್ ನಗರ ಪೊಲೀಸ್ ಠಾಣೆಗೆ ತೆರಳಿ ತನ್ನ ಪೋಷಕರು ನಾಪತ್ತೆಯಾಗಿದ್ದಾರೆ ಎಂದು ‘ಮಿಸ್ಸಿಂಗ್ ಕೇಸ್’ ದಾಖಲಿಸಲು ಪ್ರಯತ್ನಿಸಿದ್ದಾನೆ. ಆದರೆ ಈತನ ನಡವಳಿಕೆಯ ಮೇಲೆ ಸಂಶಯಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಮೂಲತಃ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯವರಾದ ಈ ಕುಟುಂಬ, ಉದ್ಯೋಗದ ನಿಮಿತ್ತ ಕೊಟ್ಟೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಆರೋಪಿ ಅಕ್ಷಯ್ ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸದ್ಯ ಆರೋಪಿಯನ್ನು ಪೊಲೀಸರು ಕೊಟ್ಟೂರಿಗೆ ಕರೆತಂದಿದ್ದು, ಮೃತದೇಹಗಳನ್ನು ಹೊರತೆಗೆಯುವ ಪ್ರಕ್ರಿಯೆ ಹಾಗೂ ಹೆಚ್ಚಿನ ತನಿಖೆ ಮುಂದುವರಿದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























