ಅಣ್ಣನ ಮನೆಗೆ ಬೆಂಕಿ ಹಚ್ಚಲು ಹೋದವ ತನ್ನನ್ನು ತಾನೇ ಸುಟ್ಟುಕೊಂಡ: ಒಂದು ಕುಟುಂಬವನ್ನೇ ಮುಗಿಸಲು ಹೋದವನ ಸ್ಥಿತಿ ಈಗ ಗಂಭೀರ
ಹೊಸಕೋಟೆ: ಚೀಟಿ ವ್ಯವಹಾರದ ಹಣಕಾಸಿನ ವಿವಾದದಿಂದ ಅಣ್ಣನ ಕುಟುಂಬವನ್ನೇ ಮುಗಿಸಲು ಸಂಚು ರೂಪಿಸಿದ್ದ ವ್ಯಕ್ತಿಯೊಬ್ಬ, ಅಣ್ಣನ ಮನೆಗೆ ಬೆಂಕಿ ಹಚ್ಚುವ ಭರದಲ್ಲಿ ತಾನೇ ಬೆಂಕಿಗೆ ಆಹುತಿಯಾದ ಘಟನೆ ಹೊಸಕೋಟೆ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ: ಕಳೆದ ಎಂಟು ವರ್ಷಗಳಿಂದ ಪಟಾಕಿ ಚೀಟಿ ನಡೆಸುತ್ತಿದ್ದ ಮುನಿರಾಜು ಎಂಬಾತ ಚೀಟಿ ವ್ಯವಹಾರದಲ್ಲಿ ಭಾರಿ ನಷ್ಟ ಅನುಭವಿಸಿದ್ದ ಎನ್ನಲಾಗಿದೆ. ಹಣ ಹೂಡಿಕೆ ಮಾಡಿದವರು ಹಣ ವಾಪಸ್ ಕೇಳಲು ಶುರು ಮಾಡಿದಾಗ, ಕುಟುಂಬಸ್ಥರು ಅಲ್ಪಸ್ವಲ್ಪ ಜಮೀನು ಮಾರಿ ಹಣ ತೀರಿಸಿದ್ದರು. ಆದರೂ ಸಾಲ ತೀರದ ಕಾರಣ, ಉಳಿದ ಜಮೀನನ್ನೂ ಮಾರಾಟ ಮಾಡುವಂತೆ ಮುನಿರಾಜು ತನ್ನ ಅಣ್ಣ ರಾಮಕೃಷ್ಣನ ಮೇಲೆ ಒತ್ತಡ ಹೇರುತ್ತಿದ್ದ. ಆದರೆ ಅಣ್ಣ ಜಮೀನು ಮಾರಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಮುನಿರಾಜು ಅಣ್ಣನ ಕುಟುಂಬವನ್ನೇ ಇಲ್ಲವಾಗಿಸಲು ಸಂಚು ರೂಪಿಸಿದ್ದ.
ತಾನೇ ಹಾಕಿದ ಬೆಂಕಿಯಲ್ಲಿ ಸುಟ್ಟುಕೊಂಡ ಆರೋಪಿ: ಮಧ್ಯರಾತ್ರಿ ವೇಳೆ ಅಣ್ಣನ ಮನೆಗೆ ಬಂದ ಮುನಿರಾಜು, ಮನೆಯ ಹೊರಗಿನಿಂದ ಬಾಗಿಲು ಹಾಕಿ ಕಿಟಕಿಯ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ಆತನ ಕೈಯಲ್ಲಿದ್ದ ಪೆಟ್ರೋಲ್ ಡಬ್ಬಿಗೂ ಬೆಂಕಿ ಹೊತ್ತಿಕೊಂಡ ಪರಿಣಾಮ, ಮುನಿರಾಜು ಮೈಮೇಲೆ ಬೆಂಕಿ ಆವರಿಸಿದೆ. ಬೆಂಕಿಯ ಜ್ವಾಲೆಯಿಂದ ರಕ್ಷಿಸಿಕೊಳ್ಳಲು ಆತ ಕಿರುಚಾಡಿದಾಗ ಅಕ್ಕಪಕ್ಕದವರು धाವಿಸಿ ಬಂದು ಬೆಂಕಿ ನಂದಿಸಿದ್ದಾರೆ.
ಸದ್ಯ ಗಂಭೀರವಾಗಿ ಗಾಯಗೊಂಡಿರುವ ಮುನಿರಾಜುನನ್ನು ಹೊಸಕೋಟೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಡೀ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























