ಓಡಿ ಹೋಗಿದ್ದ ಪತ್ನಿಯ ಜೊತೆಗೆ ಕಾರು ಚಾಲಕನನ್ನೂ ಬರ್ಬರವಾಗಿ ಹತ್ಯೆ ಮಾಡಿದ ಪತಿ!

ಬೆಳಗಾವಿ: ಕಾರು ಚಾಲಕನೊಂದಿಗೆ ಪರಾರಿಯಾಗಿದ್ದ ತನ್ನ ಪತ್ನಿ ಹಾಗೂ ಕಾರು ಚಾಲಕನನ್ನು ಯುವಕನೋರ್ವ ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದಿದೆ.
ಹೀನಾ ಮೆಹಬೂಬ್ (19) ಹಾಗೂ ಕೊಕಟನೂರ ಗ್ರಾಮದ ತೌಫಿಕ್ ಶೌಕತ್ (24) ಜೋಡಿ ನಾಲ್ಕು ತಿಂಗಳ ಹಿಂದ ವಿವಾಹವಾಗಿದ್ದರು. ವಿವಾಹದ ನಂತರ ಬಾಡಿಗೆಗೆ ಕಾರೊಂದನ್ನು ಬುಕ್ ಮಾಡಿಕೊಂಡು ದರ್ಗಾಕ್ಕೆ ತೆರಳಿದ್ದರು. ಇದೇ ಕಾರಿನ ಚಾಲಕ ಯಾಸಿನ್ ಅದಮ್ (21) ಜೊತೆಗೆ ಹೀನಾ ಮೆಹಬೂಬ್ ಗೆ ಪ್ರೇಮಾಂಕುರವಾಗಿತ್ತು. ಇದಾಗಿ ಒಂದು ತಿಂಗಳಲ್ಲೇ ಹೀನಾ ಮೆಹಬೂಬ್ ಪತಿಗೆ ಕೈಕೊಟ್ಟು ಪ್ರಿಯಕರ ಯಾಸಿನ್ ಅದಮ್ ನೊಂದಿಗೆ ಪರಾರಿಯಾಗಿದ್ದಳು ಎನ್ನಲಾಗಿದೆ.
ಪತ್ನಿ ಕಾರು ಚಾಲಕನೊಂದಿಗೆ ಪರಾರಿಯಾಗಿದ್ದರಿಂದ ರೊಚ್ಚಿಗೆದ್ದ ತೌಫಿಕ್ ಶೌಕತ್ ಇಬ್ಬರನ್ನೂ ಹತ್ಯೆ ಮಾಡುವ ಸಂಚು ರೂಪಿಸಿದ್ದ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ತೋಟದ ಮನೆಯಲ್ಲಿ ಯಾಸಿನ್, ಹೀನಾ ಜೋಡಿ ವಾಸವಿರುವುದು ತಿಳಿದು ಮನೆಗೆ ನುಗ್ಗಿದ್ದು, ಮೊದಲು ಹೀನಾಳನ್ನು ಹತ್ಯೆ ಮಾಡಿ ಬಳಿಕ ಆಕೆಯ ಪ್ರಿಯಕರ ಯಾಸಿನ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಜೋಡಿಯ ಮೇಲೆ ದಾಳಿ ನಡೆಸುವ ವೇಳೆ ತಡೆಯಲು ಬಂದ ಅತ್ತೆ ಮಾವನ ಮೇಲೆ ಕೂಡ ತೌಫಿಕ್ ಲಾಂಗ್ ನಿಂದ ಹಲ್ಲೆ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಹಾರಾಷ್ಟ್ರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.